ಬೆಂಗಳೂರು, ಸೆ 15 (Daijiworld News/RD): ದೇಶಾಭಿಮಾನ ಇರುವವರು ಬಿಜೆಪಿಗೆ ವೋಟ್ ಹಾಕುತ್ತಾರೆ, ಪಾಕಿಸ್ತಾನವನ್ನು ಬೆಂಬಲಿಸುವವರು ಬಿಜೆಪಿಗೆ ವೋಟ್ ಹಾಕಲ್ಲ. ನಾನು ಇದೂವರೆಗೂ ನನ್ನ ಕ್ಷೇತ್ರದಲ್ಲಿ ಒಬ್ಬ ಮುಸ್ಲಿಂನಿಗೂ ವೋಟ್ ಹಾಕಿ ಅಂತ ಕೇಳಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದ ಪುರಭವನದಲ್ಲಿ ಶ್ರೀರಾಮಸೇನೆ ಹಮ್ಮಿಕೊಂಡಿದ್ದ, ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ವಿಧಾನಸಭೆಗೆ ಆಯ್ಕೆಯಾಗಿದ್ದು, ನಾನಂತೂ ಮುಸ್ಲಿಮರ ಓಟ್ ಕೇಳಿಲ್ಲ. ನನ್ನ ಕ್ಷೇತ್ರದಲ್ಲಿ 55 ರಿಂದ 60 ಸಾವಿರ ಮುಸ್ಲಿಂರ ವೋಟ್ ಗಳಿವೆ. ಇದೂವರೆಗೂ ಒಬ್ಬ ಮುಸ್ಲಿಮನಿಗೂ ನಮಸ್ಕಾರ ಹೊಡೆದು ವೋಟ್ ಕೇಳಿಲ್ಲ. ಆದ್ರೂ 47 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ದೇಶಾಭಿಮಾನ ಇರುವ ಮುಸ್ಲಿಂ ಬಿಜೆಪಿಗೆ ವೋಟ್ ಹಾಕುತ್ತಾನೆ. ಪಾಕಿಸ್ತಾನ ಪರ ಇರೋ ಮುಸ್ಲಿಂ ವ್ಯಕ್ತಿ ಬಿಜೆಪಿಗೆ ವೋಟ್ ಹಾಕುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಗೋಹತ್ಯೆ ನಿಷೇಧವನ್ನು ರದ್ದುಗೊಳಿಸಿತ್ತು. ಆದರೆ ಬಿಜೆಪಿ ಸರ್ಕಾರ ಇನ್ನು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಗೋ ಹತ್ಯೆ ನಿಷೇಧ ಮಾಡುತ್ತೇವೆ ಎಂದರು. ಇನ್ನು ಶೀಘ್ರದಲ್ಲಿಯೇ ಅಯೋಧ್ಯದಲ್ಲಿ ರಾಮಮಂದಿರ ನಿರ್ಮಿಸಲಾಗುವುದು ಎಂದು ಹೇಳಿದರು. ಕೇಂದ್ರದಲ್ಲಿಯ ಬಿಜೆಪಿ ಸರ್ಕಾರದ ಕಾರ್ಯಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ತ್ರಿಪಲ್ ತಲಾಖ್ , ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದು, ಹೀಗೆ ಜನಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದರಿಂದಾಗಿ ನರೇಂದ್ರ ಮೋದಿ ಅವರು ಇರೋವರೆಗೂ ಅವರೇ ಭಾರತದ ಪ್ರಧಾನಿಗಳಾಗಿ ಇರುತ್ತಾರೆ. ಇನ್ನು ಮುಂದೆ ಪಾಕಿಸ್ತಾನ ಭೂಪಟದಿಂದ ಮಾಯವಾಗಿ ಅಖಂಡ ಭಾರತವಾಗಲಿದೆ. ಕರ್ನಾಟಕದಲ್ಲಿ ಪ್ರತಿ ಗ್ರಾಮದಲ್ಲಿ ಹಿಂದುತ್ವ ಬೆಳೆಯುತ್ತಿದ್ದರಿಂದ ಇಂದು ಬಿಜೆಪಿ ಅಧಿಕಾರದಲ್ಲಿದೆ ಎಂದು ಈ ಸಂದರ್ಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.