ಶ್ರೀನಗರ, ಸೆ 16 (Daijiworld News/RD): ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ಭೀತಿ ಉಂಟಾಗಿದ್ದು, ಕಣಿವೆ ರಾಜ್ಯದಲ್ಲಿ ಮತ್ತೆ ಹೈ ಅಲರ್ಟ್ ಘೋಷಿಸಿದೆ.
ಶ್ರೀನಗರದಲ್ಲಿ ಉಗ್ರರು ನುಸುಳಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ರಾಜ್ ಭಾಗ್, ಜವಾಹರ್ ನಗರ, ಲಾಲ್ ಚೌಕ್ ನಲ್ಲಿ ಬಿಗಿ ಭದ್ರತೆ ಹೆಚ್ಚಾಗಿದ್ದು. ನುಸುಳಿರುವ ಉಗ್ರರ ಪತ್ತೆ ಹಚ್ಚಲು ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ಶ್ರೀನಗರದಲ್ಲಿ ಕಳೆದ ಕೆಲ ದಿನಗಳಿಂದ ಸುಮಾರು 25 ಉಗ್ರರು ಗುಪ್ತವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಅಂಗಡಿ ಮುಂಗಟ್ಟು ತೆರೆಯದಂತೆ ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾರೆ. ಜೊತೆಗೆ ಶೋಪಿಯಾನ್ ನಲ್ಲಿ ಬಾಗಿಲು ತೆರೆದಿದ್ದ ಆಟೋ ಮೊಬೈಲ್ ಮಳಿಗೆಯೊಂದಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಕೂಡ ನಡೆದಿದೆ.
ಇನ್ನು ಸಿಸಿಟಿವಿಗಳನ್ನು ಬಂದ್ ಮಾಡುವಂತೆ ಕೆಲ ಅಂಗಡಿ ಮಾಲೀಕರಿಗೆ ಮತ್ತು ಮಾಧ್ಯಮ ಕಚೇರಿಗಳಿಗೆ ಉಗ್ರರು ಬೆದರಿಕೆಯೊಡ್ಡಿದ್ದಾರೆ. ಇದೀಗ ಉಗ್ರರು ದೊಡ್ಡ ಮಟ್ಟದಲ್ಲಿ ದಾಳಿಗೆ ಹೊಂಚು ಹಾಕುತ್ತಿದ್ದಾರೆ ಎಂಬ ಅನುಮಾನ ಭದ್ರತಾ ಪಡೆಗಳಲ್ಲಿ ಮೂಡಿದೆ.