ಚಿತ್ರದುರ್ಗ, ಸೆ 16 (Daijiworld News/RD): ಸ್ವಚ್ಚತಾ ಸಪ್ತಾಹ ಅಭಿಯಾನದ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಮವಾರ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಆವರಣದ ಸುತ್ತಾ ಸ್ವಚ್ಛತಾ ಕಾರ್ಯ ನಡೆಸಿದರು.
ಭಾನುವಾರ ರಾತ್ರಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಅಂಗವಾಗಿ ಬಿಜೆಪಿ ಹಮ್ಮಿಕೊಂಡಿರುವ ಸ್ವಚ್ಚತಾ ಸಪ್ತಾಹಕ್ಕೆ ಚಾಲನೆ ನೀಡಿದರು. ಬೆಳಗ್ಗೆ 8.30 ಕ್ಕೆ ಆಸ್ಪತ್ರೆ ಆವರಣಕ್ಕೆ ಆಗಮಿಸಿದ ಕಟೀಲ್, ವಾರ್ಡ್ ಗಳನ್ನು ಪರಿಶೀಲಿಸಿ, ಸ್ವಚ್ಛತೆಗೆ ಸೂಚಿಸಿದರು. ಬಳಿಕ ಸಂಸದರು, ಕೈಲೊಂದು ಪೊರಕೆ ಹಿಡಿದು, ಆಸ್ಪತ್ರೆ ಆವರಣದ ಸುತ್ತಾ ಕಸ ಗುಡಿಸಿ ನಗರಸಭೆಯ ಲಾರಿಗೆ ಹಾಕಿದರು.
ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಸಂಸದ ಎ. ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್, ಮುಖಂಡರಾದ ಲಿಂಗಮೂರ್ತಿ, ಜಿ.ಎಂ. ಸುರೇಶ್, ರತ್ನಮ್ಮ, ಶಿವಣ್ಣಚಾರ್, ತಿಪ್ಪೇಸ್ವಾಮಿ ಹಾಗೂ ಡಿಎಚ್ಒ ಫಾಲಾಕ್ಷಾ, ಡಿ ಎಸ್ ಬಸವರಾಜಪ್ಪ, ಆರ್ ಎಂ ಓ ಜಯಪ್ರಕಾಶ್ ಈ ವೇಳೆ ಪಾಲ್ಗೊಂಡಿದ್ದರು.