ಲಕ್ನೋ, ಸೆ 16 (Daijiworld News/RD): ನೂತನ ಮೋಟಾರ್ ವಾಹನ ಕಾಯ್ದೆಯಡಿ ಜಾರಿಗೊಂಡಿದ್ದು, ಇದೀಗ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಎತ್ತಿನ ಗಾಡಿಗೆ ವಿಮೆ ಮಾಡಿಸದ ವಾಹನ ಎಂದು 1 ಸಾವಿರ ರೂ. ದಂಡ ವಿಧಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಬಿಜನೌರ್ ಜಿಲ್ಲೆಯ ಸಾಹಸಪುರ ಗ್ರಾಮದಲ್ಲಿ ನಡೆದಿದೆ.
ರೈತ ರಿಯಾಜ್ ಹಸನ್ ಅವರ ಎತ್ತಿನ ಗಾಡಿಯಾಗಿದ್ದು, ತಮ್ಮ ಜಮೀನಿನ ಪಕ್ಕದಲ್ಲಿ ಎತ್ತಿನ ಗಾಡಿಯನ್ನು ನಿಲ್ಲಿಸಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಸಬ್ಇನ್ ಸ್ಪೆಕ್ಟರ್ ಪಂಕಜ್ ಕುಮಾರ್ ಮತ್ತು ಅವರ ತಂಡ ರಸ್ತೆ ಬದಿ ನಿಲ್ಲಿಸಿದ ಎತ್ತಿನ ಬಂಡಿ ನೋಡಿದ್ದಾರೆ. ಬಳಿಕ ಪೊಲೀಸರು ಎತ್ತಿನ ಗಾಡಿ ತೆಗೆದುಕೊಂಡು ಹಸನ್ ಮನೆಗೆ ಹೋಗಿ ವಿಮೆ ಮಾಡಿಸದ ವಾಹನ ಎಂದು 1 ಸಾವಿರ ರೂ. ದಂಡದ ಬಿಲ್ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಿಯಾಜ್ ಹಸನ್, ನನ್ನ ಜಮೀನಿನ ಪಕ್ಕದಲ್ಲಿ ಬಂಡಿ ನಿಲ್ಲಿಸಿದ್ದಕ್ಕೆ ದಂಡ ಹಾಕಿದ್ದಾರೆ. ಆದರೆ ಮೋಟಾರ್ ವಾಹನ ಕಾಯ್ದೆಯಡಿ ಹೇಗೆ ದಂಡ ಹಾಕಿದ್ರು ಎಂಬುವುದು ತಿಳಿದಿಲ್ಲ, ಜೊತೆಗೆ ಶನಿವಾರ ದಂಡ ಹಾಕಿದ್ದ ಪೊಲೀಸರು ಭಾನುವಾರ ರದ್ದು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಬೆಕು ಎಂಬ ಕಾನೂನು ಇದೆ, ಆದರೆ ಎತ್ತಿನ ಬಂಡಿಗೇಕೆ ದಂಡ ವಿಧಿಸಿರುವುದು ಎಂಬ ಪ್ರಶ್ನೆ ಎಲ್ಲರಲ್ಲಿ ಕಾಡಿದ್ದು, ಇದಕ್ಕೆ ಸ್ಷಷ್ಟನೆ ನೀಡಿದ, ಸಾಹಸಪುರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಪಿ.ಡಿ.ಭಟ್ಟ, ಎತ್ತಿನ ಬಂಡಿ ಮೂಲಕವೇ ಮರಳು ಸಾಗಾಟ ಮಾಡಲಾಗುತ್ತದೆ. ಹಸನ್ ಸಹ ಬಂಡಿ ಮೂಲಕ ಮರಳು ಸಾಗಿಸುತ್ತಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಪೊಲೀಸರಿಗೆ ಮೋಟಾರ್ ವಾಹನ ಕಾಯ್ದೆ ಮತ್ತು ಬೇರೆ ಅಪರಾಧಕ್ಕೆ ವಿಧಿಸುವ ದಂಡದ ಬಗ್ಗೆ ಮಾಹಿತಿ ಇರಲಿಲ್ಲ. ಹಾಗಾಗಿ ಮೋಟರ ವಾಹನ ಕಾಯ್ದೆಯಡಿಯಲ್ಲಿ ದಂಡ ವಿಧಿಸಿದ್ದಾರೆ ಎಂದು ಹೇಳಿದರು.