ನವದೆಹಲಿ, ಸೆ 16 (Daijiworld News/RD): ಸುಪ್ರೀಂ ಕೋರ್ಟ್ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲು ಅವಕಾಶ ನೀಡಿದ್ದು, ಇದರ ಜೊತೆ ಯಾವುದೇ ರೀತಿಯ ರಾಜಕೀಯ ರ್ಯಾಲಿ ನಡೆಸುವಂತಿಲ್ಲ ಎಂಬ ಆದೇಶವನ್ನು ನೀಡಿದೆ.
ಕೇಂದ್ರ ಸರ್ಕಾರ ಸಂವಿಧಾನ ವಿಧಿ 370 ರದ್ದುಪಡಿಸಿದ ನಂತರ ಜಮ್ಮು-ಕಾಶ್ಮೀರದ ಪರಿಸ್ಥಿತಿ ತಿಳಿಯಲು ಭೇಟಿ ನೀಡಲು ಅವಕಾಶ ಕೋರಿ ಗುಲಾಂ ನಬಿ ಆಜಾದ್ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಎ ಎಂ ಸಿಂಘ್ವಿ, ಜಮ್ಮು-ಕಾಶ್ಮೀರ ಜನತೆಯನ್ನು ಭೇಟಿ ಮಾಡಿ ಅವರ ಅಭಿವೃದ್ಧಿ ಬಗ್ಗೆ ವಿಚಾರಿಸಲು ಗುಲಾಂ ನಬಿ ಆಜಾದ್ ಬಯಸುತ್ತಿದ್ದಾರೆ ಎಂದರು.
ಇದೀಗ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ನಾಲ್ಕು ಜಿಲ್ಲೆಗಳಾದ ಶ್ರೀನಗರ, ಜಮ್ಮು, ಬರಮುಲ್ಲಾ ಮತ್ತು ಅನಂತ್ ನಾಗ್ ಜಿಲ್ಲೆಗಳಿಗೆ ಭೇಟಿ ನೀಡಬಹುದು ಎಂದಿದೆ.
ಈ ಹಿಂದೆ ಆಜಾದ್ ಅವರು ಮೂರು ಬಾರಿ ಜಮ್ಮುವಿಗೆ ಭೇಟಿ ನೀಡಲು ಪ್ರಯತ್ನಿಸಿದರೂ ವಿಮಾನ ನಿಲ್ದಾಣದಿಂದ ವಾಪಸ್ಸು ಕಳುಹಿಸಲಾಗಿತ್ತು.