ನವದೆಹಲಿ, ಸೆ.17(Daijiworld News/SS): ಒಂದು ದೇಶ, ಒಂದು ಭಾಷೆ ಎಂಬ ಕೇಂದ್ರ ಸಚಿವ ಅಮಿತ್ ಶಾ ಅವರ ಹಿಂದಿ ಭಾಷೆಯ ಹೇರಿಕೆ ಕುರಿತಂತೆ ಬಾರಿ ಚರ್ಚೆಯಾಗುತ್ತಿದ್ದು, ಈ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮೌನ ಮುರಿದಿದ್ದಾರೆ.
ಸೆಪ್ಟೆಂಬರ್ 14 ರಂದು ಹಿಂದಿ ದಿವಸ್ ಆಚರಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, "ಒಂದು ದೇಶ, ಒಂದೇ ಭಾಷೆ" ಎಂಬ ಪರಿಕಲ್ಪನೆಯ ಬಗ್ಗೆ ಮಾತನಾಡಿದ್ದರು. ಇದು ತೀವ್ರ ವಿವಾದ ಸೃಷ್ಟಿಸಿತ್ತು. ದಕ್ಷಿಣ ಭಾರತದ ಕೆಲವು ರಾಜ್ಯಗಳು ಹಿಂದಿ ಹೇರಿಕೆಯನ್ನು ಕಟುವಾಗಿ ವಿರೋಧಿಸಿದ್ದವು. ಇದೀಗ ಬಹುಭಾಷಾ ನೀತಿ ಭಾರತದ ದೌರ್ಬಲ್ಯವಲ್ಲ ಎಂದು ಕಾಂಗ್ರೆಸ್'ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಹಿಂದಿ ಹೇರಿಕೆ ಬಗ್ಗೆ ಎಲ್ಲೆಲ್ಲೂ ಅಪಸ್ವರ ಕೇಳಿಬರುತ್ತಿರುವ ಸಂದರ್ಭದಲ್ಲಿ ಭಾರತದ 23 ಭಾಷೆಗಳನ್ನು ನೆನೆದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಭಾರತದ ವಿವಿಧ ಭಾಷೆಗಳು ಅದರ ದೌರ್ಬಲ್ಯವಲ್ಲ" ಎಂದಿದ್ದಾರೆ. ಈ ಮೂಲಕ ಹಿಂದಿ ಹೇರಿಕೆಯ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ.
ಕರ್ನಾಟಕ ಸೇರಿದಂತೆ ಹಲವೆಡೆ ಹಿಂದಿ ಹೇರಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಹಲವರು ಟ್ವೀಟ್ ಮೂಲಕ ತಮ್ಮ ನಿಲುವನ್ನು ತಿಳಿಸುತ್ತಿದ್ದಾರೆ.