ನವದೆಹಲಿ, ಸೆ.17(Daijiworld News/SS): ಸ್ಪೀಕರ್ ನೀಡಿದ್ದ ಅನರ್ಹತೆ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ನ 17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮತ್ತೆ ಮುಂದೂಡಿದೆ.
ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು ಪ್ರಕರಣದ ವಿಚಾರಣೆಯನ್ನು ಮಂಗಳವಾರ ಬೆಳಿಗ್ಗೆ ಕೈಗೆತ್ತಿಕೊಂಡಿತು. ಕೆಪಿಸಿಸಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲು ಮುಂದಾದರು. ಈ ವೇಳೆ, ಕರ್ನಾಟಕ ಮೂಲದ ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ವಿಚಾರಣೆಯಿಂದ ಹಿಂದಕ್ಕೆ ಸರಿದರು. ಹೀಗಾಗಿ ವಿಚಾರಣೆ ಮುಂದಿನ ಸೋಮವಾರಕ್ಕೆ (ಸೆಪ್ಟೆಂಬರ್ 23) ಮುಂದೂಡಲ್ಪಟ್ಟಿದೆ.
ತ್ವರಿತ ವಿಚಾರಣೆ ನಡೆಸುವಂತೆ ಈ ಮೊದಲು ನಾಲ್ಕು ಬಾರಿ ಅನರ್ಹರು ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಸುಪ್ರೀಂ ಕೋರ್ಟ್ ರಿಜಿಸ್ಟರ್ ಮೂಲಕ ಲಿಸ್ಟ್ ಆಗಲಿ ಎಂದು ತಿಳಿಸಿತ್ತು.
ಇಂದು ಎಂ.ವಿ.ರಮಣ್ ನೇತೃತ್ವದ ಪೀಠ ವಿಚಾರಣೆ ನಡೆಸಬೇಕಿತ್ತು. ಆದರೆ ಪೀಠದ ಸದಸ್ಯರಾಗಿದ್ದ ಶಾಂತನಗೌಡರ್ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.