ಹಾಸನ, ಸೆ.17(Daijiworld News/SS): ನಮ್ಮ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಕಾಲವೇ ಎಲ್ಲವನ್ನೂ ನಿರ್ಣಯ ಮಾಡುತ್ತದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಮುಂದಿನ ಚುನಾವಣೆಗಳಲ್ಲಿ ಮೈತ್ರಿ ಬಗ್ಗೆ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ನಿರ್ಣಯವೇ ಅಂತಿಮ. ರಾಜ್ಯದಲ್ಲಿ ಜೆಡಿಎಸ್ ಪ್ರಬಲವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಜನರೇ ಉಗಿಯುವ ಕಾಲ ಬರುತ್ತದೆ. ನಮ್ಮ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಯಾರ ಹೇಳಿಕೆಗೂ ಅವರು ಕಿವಿಗೊಡಬಾರದು. ಕಾಲವೇ ಎಲ್ಲವನ್ನೂ ನಿರ್ಣಯ ಮಾಡುತ್ತದೆ ಎಂದು ಹೇಳಿದರು.
ನಾವು 37 ಶಾಸಕರಿದ್ದು 48 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದೇವೆ. ಆದರೆ ಸಿಎಂ ಯಡಿಯೂರಪ್ಪ, ಸಾಲಮನ್ನಾ ಮಾಡಲು ನನ್ನ ಬಳಿ ನೋಟು ಮುದ್ರಿಸುವ ಯಂತ್ರವಿಲ್ಲ ಎಂದಿದ್ದರು. ಆದರೆ ಈಗ ಎಲ್ಲವೂ ಅವರ ಬಳಿಯಿದೆ. ಸಾಲಮನ್ನಾ ಹಣವನ್ನು ತಡೆಹಿಡಿದಿರುವುದನ್ನು ಮೊದಲು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಕೆಲವರು ನಮ್ಮ ಪಕ್ಷದಿಂದ ಸವಲತ್ತು ಪಡೆದು ಈಗ ಅಪಪ್ರಚಾರ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಸೋಲಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಒಟ್ಟಾಗಿ ಕೆಲಸ ಮಾಡಿದ್ದು ಎಲ್ಲರಿಗೂ ಗೊತ್ತಿದೆ ಎಂದು ಆರೋಪಿಸಿದರು.