ಬೆಂಗಳೂರು, ಸೆ.17(Daijiworld News/SS): ಅನರ್ಹ ಶಾಸಕರು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅವರು ಬಿಜೆಪಿ ಜೊತೆ ಸೇರಿಕೊಂಡು ರಾಜಕಾರಣ ರೂಪಿಸಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಡೂರಾವ್ ಹೇಳಿದರು.
ಇವತ್ತಿನ ಸರ್ಕಾರ ಸತ್ತು ಬಿದ್ದಿದೆ. ಹಿಂದಿನ ಸರ್ಕಾರದ ಯೋಜನೆಗಳನ್ನು ತನಿಖೆ ಮಾಡುವುದರಲ್ಲಿಯೇ ಹೆಚ್ಚು ತಲ್ಲೀನವಾಗಿದೆ. ಮೈತ್ರಿ ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಕೇಂದ್ರದವರು ಸಿಎಂಗೆ ಮರ್ಯಾದೆ ಕೊಡುತ್ತಿಲ್ಲ. ಈ ಸರ್ಕಾರ ಬಂದ ಮೇಲೆ ಜನರಿಗೆ ಭ್ರಮ ನಿರಸನ ಆಗಿದೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸುವ ಬಯಕೆ ಹೊಂದಿದ್ದರೆ ಅವರ ಇಚ್ಚೆ. ನಾವು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಎಲ್ಲ ರೀತಿಯ ತಯಾರಿ ನಡೆಸುತ್ತಿದ್ದೇವೆ. ಅನರ್ಹ ಶಾಸಕರ ಪ್ರಕರಣದಲ್ಲಿ ರಮೇಶ್ ಕುಮಾರ್ ಕಾನೂನಾತ್ಮಕವಾಗಿಯೇ ಕ್ರಮ ಕೈಗೊಂಡಿದ್ದಾರೆ. ಅವರ ಆದೇಶವನ್ನು ಯಾವ ಕೋರ್ಟ್'ಗಳು ಏಕಾ ಏಕಿ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಅನರ್ಹ ಶಾಸಕರಿಗೆ ಬಿಜೆಪಿಯನ್ನು ನಂಬದಂತೆ ಹೇಳಿದ್ದೆ. ಕಾಂಗ್ರೆಸ್'ನಲ್ಲಿ ರಾಜರಾಗಿದ್ದರು. ಈಗ ಅವರ ಪರಿಸ್ಥಿತಿ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ. ಅನರ್ಹ ಶಾಸಕರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅವರು ಬಿಜೆಪಿ ಜೊತೆ ಸೇರಿಕೊಂಡು ರಾಜಕಾರಣ ರೂಪಿಸಿಕೊಳ್ಳಲಿ ಎಂದು ಹೇಳಿದರು.
ಇದೇ ವೇಳೆ ಶಿವಕುಮಾರ್ ವಿಚಾರದಲ್ಲಿ ಮಾತನಾಡಿದ ಅವರು, ಪಕ್ಷ ಅವರೊಂದಿಗೆ ನಿಂತಿದೆ. ಕುಮಾರಸ್ವಾಮಿ ಅವರೂ ಡಿಕೆಶಿ ಪರವಾಗಿ ಮಾತನಾಡಿದ್ದಾರೆ. ಅವರ ಬಗ್ಗೆ ಬೇರೆ ಏನು ಮಾತನಾಡುವುದಿಲ್ಲ. ಡಿಕೆಶಿಗೆ ನ್ಯಾಯಾಲಯದಲ್ಲಿ ಜಯ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.