ನವದೆಹಲಿ, ಸೆ.18(Daijiworld News/SS): ಡಿ.ಕೆ.ಶಿವಕುಮಾರ್ ವಿರುದ್ಧ ಇ.ಡಿ ಅಧಿಕಾರಿಗಳು ಆಧಾರ ರಹಿತ ಆರೋಪ ಮಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಜಾಮೀನು ಸಿಗುವ ಭರವಸೆ ಇದೆ. ಯಾರದೋ ಆಸ್ತಿಯನ್ನು ಯಾರದೋ ಮನೆಯಲ್ಲಿ ದಾಳಿ ಮಾಡಿ, ಅದು ಡಿ.ಕೆ.ಶಿವಕುಮಾರ್ ಆಸ್ತಿ ಎಂದು ತೋರಿಸುತ್ತಿದ್ದಾರೆ. ಆದಾಯದ ಮೂಲ ಇಲ್ಲದೇ ಯಾರೂ ವ್ಯಾಪಾರ ಮಾಡುವುದಿಲ್ಲ. ಎಲ್ಲ ವ್ಯವಹಾರಗಳಿಗೂ ನಾವು ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.
30 ವರ್ಷದ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ. ಎಲ್ಲದಕ್ಕೂ ದಾಖಲೆ ಇದೆ. ಹೀಗಾಗಿ, ಜಾಮೀನು ಸಿಗುವ ವಿಶ್ವಾಸ ಇದೆ. ಆದರೆ, ಇ.ಡಿಯವರಿಗೆ ಒತ್ತಡ ಇರಬಹುದು ಎಂದು ತಿಳಿಸಿದ್ದಾರೆ.
ನಾವು ನಮ್ಮ ಕುಟುಂಬದ ಎಲ್ಲ ಆಸ್ತಿಯ ದಾಖಲೆಗಳನ್ನು ಕೋರ್ಟ್ ಮುಂದೆ ಇಟ್ಟಿದ್ದೇವೆ. ನಮ್ಮ ಬ್ಯಾಂಕ್ ಅಕೌಂಟ್ಗಳು ಎಷ್ಟಿವೆ ಎಂದು ಕೋರ್ಟ್ ಮುಂದೆ ಹೇಳಿದ್ದೇವೆ. ಇ.ಡಿ ಅಧಿಕಾರಿಗಳು ಹೇಳಿದ ಮಾತ್ರಕ್ಕೆ ಎಲ್ಲವೂ ಸತ್ಯವಾಗುವುದಿಲ್ಲ. ಡಿ.ಕೆ.ಶಿವಕುಮಾರ್ ಆರೋಪ ಮುಕ್ತರಾಗುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಎಂಜಿನಿಯರ್ ಪದವೀಧರೆಯಾಗಿದ್ದಾಳೆ. ಅವಳು ಬಿಜಿನೆಸ್ ಮಾಡಬೇಕೆಂದು ಆಸೆ ಪಟ್ಟಿದ್ದಳು. ನಾನು ಅವಳಿಗೆ 7 ಕೋಟಿ ರೂ.ಸಾಲ ಕೊಟ್ಟಿದ್ದೇನೆ. ಬೇರೆಯವರು ಸಾಲ ಕೊಟ್ಟಿದ್ದಾರೆ. ಬ್ಯಾಂಕ್ನವರು 40 ಕೋಟಿ ಸಾಲ ಕೊಟ್ಟಿದ್ದಾರೆ. ಅಪ್ಪನಾಗಿ ಡಿ.ಕೆ.ಶಿವಕುಮಾರ್ ಕೂಡ ಬೆಂಬಲ ಕೊಟ್ಟಿದ್ದಾರೆ. ಅವಳು ಒಂದೇ ಒಂದು ರೂಪಾಯಿ ಅವ್ಯವಹಾರ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.