ಬೆಂಗಳೂರು, ಸೆ.18(Daijiworld News/SS): ನಮ್ಮೊಂದಿಗೆ ನಿಂತ ನಿಮ್ಮೆಲ್ಲರಿಗೂ ಧನ್ಯವಾದಗಳು. ಜಗತ್ತಿನಾದ್ಯಂತ ಇರುವ ಭಾರತೀಯರ ಈ ಭರವಸೆ ಮತ್ತು ಕನಸುಗಳನ್ನು ನಾವು ಉಳಿಸಿಕೊಂಡು, ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಇಸ್ರೋ ಟ್ವೀಟ್ ಮಾಡಿದೆ.
ಸೆ.7ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿಯಬೇಕಿದ್ದ ಇಸ್ರೋ ಉಡಾಯಿಸಿದ ಚಂದ್ರಯಾನ-2ರ ವಿಕ್ರಂ ಲ್ಯಾಂಡರ್ ಅಂತಿಮ ಹಂತದಲ್ಲಿ ನಿಯಂತ್ರಣ ಕಳೆದುಕೊಂಡಿತ್ತು. ನಿಯಂತ್ರಣ ಕಳೆದುಕೊಂಡ ದಿನದಿಂದ ವಿಕ್ರಂ ನೌಕೆಯೊಂದಿಗೆ ಸಂವಹನ ಸಾಧಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಇಸ್ರೋ ಮಾಡುತ್ತಿದೆ.
ಚಂದ್ರನ ನೆಲದ ಮೇಲೆ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಗಳ ಸಕ್ರಿಯ ಕಾರ್ಯಾಚರಣೆ ಅವಧಿ ಭೂಮಿಯ ಕಾಲಮಾನದಲ್ಲಿ 14 ದಿನಗಳಾಗಿರುತ್ತವೆ. ಈ ಹಿನ್ನಲೆ 'ವಿಕ್ರಂ' ಲ್ಯಾಂಡರ್'ನ ಸಂಪರ್ಕ ಪಡೆಯಲು ಇಸ್ರೋ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಸೆಪ್ಟೆಂಬರ್ 21 ರೊಳಗೆ ಸಂಪರ್ಕ ಸಿಕ್ಕದೆ ಇದ್ದರೆ, ವಿಕ್ರಂ ಲ್ಯಾಂಡರ್ ನ ಆಯುಷ್ಯ ಮುಗಿದುಹೋಗಲಿದೆ.
ಇದೀಗ ವಿಕ್ರಮ್ ಜೊತೆ ಸಂಪರ್ಕ ಸಾಧಿಸಲು ವಿಜ್ಞಾನಿಗಳು ಪ್ರಯತ್ನಿಸಿದ್ದು, ಈ ನಡುವೆ ಚಂದ್ರಯಾನದ ಯಶಸ್ಸಿಗಾಗಿ ಹಾರೈಸಿರುವ, ಹಾರೈಸುತ್ತಿರುವ ಎಲ್ಲರಿಗೂ ಧನ್ಯವಾದ ತಿಳಿಸಿದೆ.