ಬೆಂಗಳೂರು, ಸೆ.18(Daijiworld News/SS): ಯಾವುದೇ ಒಂದು ಭಾಷೆ, ಸಮುದಾಯದ ಕಡಗಣನೆ ಈ ನೆಲದಲ್ಲಿ ಸಲ್ಲದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಭಾರತ ಬಹುತ್ವದ ನೆಲ, ಇಲ್ಲಿನ ವಿವಿಧ ಭಾಷೆ, ಸಂಸ್ಕೃತಿಯನ್ನು ಗೌರವಿಸಿದಾಗ ಮಾತ್ರ ಒಕ್ಕೂಟ ವ್ಯವಸ್ಥೆ ಬಲಗೊಳ್ಳಲು ಸಾಧ್ಯ. ಈ ನೆಲದಲ್ಲಿ ಯಾವುದೇ ಒಂದು ಭಾಷೆ, ಸಮುದಾಯದ ಕಡಗಣನೆ ಸಲ್ಲದು ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಐಬಿಪಿಎಸ್ ನಂತರ ಎಲ್ಐಸಿ ಪರೀಕ್ಷೆಯಲ್ಲಿಯೂ ಹಿಂದಿ-ಇಂಗ್ಲಿಷ್ಗೆ ಮಣೆ, ಕನ್ನಡಕ್ಕೆ ಬರೆ. ಇನ್ನೆಷ್ಟು ದಿನ ಕನ್ನಡಿಗರು ಪರಭಾಷೆಯ ಹೇರಿಕೆಯನ್ನು ಸಹಿಸಿಕೊಳ್ಳಬೇಕು..? ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಬಣ್ಣ ಬಹಳ ಬೇಗ ಬಯಲಾಗುತ್ತಿದೆ. ತನ್ನ ನಿಜ ಬಣ್ಣ ದಲಿತ ವಿರೋಧಿ ಎನ್ನುವುದು ಸಾಬೀತಾಗುತ್ತಿದೆ. ನಮ್ಮ ಕಾಲದ ಕ್ರಾಂತಿಕಾರಿ ಎಸ್ಸಿಪಿ-ಟಿಎಸ್ಪಿ ಯೋಜನೆಯನ್ನು ದುರ್ಬಲಗೊಳಿಸಲು ಹೊರಟರೆ ದಲಿತ ಸಮುದಾಯ ದಂಗೆ ಎದ್ದೀತು. ಅದರ ಮುಂಚೂಣಿಯಲ್ಲಿ ನಾನೇ ಇರುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಎಸ್ಸಿಪಿ/ಟಿಎಸ್ಪಿ ಯೋಜನೆಗೆ ತಿದ್ದುಪಡಿ ತಂದು ಅನುದಾನ ಕಡಿತಗೊಳಿಸುವ ಬಿಜೆಪಿ ಸರ್ಕಾರದ ದುಷ್ಟ ಆಲೋಚನೆಯ ವಿರುದ್ಧ ಶಾಸಕರು ಕೂಡ ದನಿ ಎತ್ತಬೇಕು ಎಂದು ವಿನಂತಿಸಿಕೊಂಡಿದ್ದಾರೆ.