ಬೆಂಗಳೂರು, ಸೆ 18 (Daijiworld News/MSP): ನಗರದ ಎಂ ಜಿ ರಸ್ತೆಯಲ್ಲಿರುವ ಯೂಕೋ ಬ್ಯಾಂಕ್ ನ ಕಟ್ಟಡದಲ್ಲಿ ಬುಧವಾರ ಮಧ್ಯಾಹ್ನದ ವೇಳೆ ಭಾರೀ ಆಗ್ನಿ ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಏಣಿ ಮೂಲಕ ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ಯುಕೋ ಬ್ಯಾಂಕ್ ನ ಎರಡನೇ ಮಹಡಿಯಲ್ಲಿ ಭಾರಿ ಅಗ್ನಿ ಕಾಣಿಸಿಕೊಂಡ ಪರಿಣಾಮ ಸಿಬ್ಬಂದಿ ಹಾಗೂ ನಾಗರಿಕರು ಭಯಭೀತಗೊಂಡಿದ್ದು ಆಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಯಾವುದೇ ಪ್ರಾಣ ಹಾನಿ ಆಗಿಲ್ಲ. ಆದರೆ ಲಿಫ್ಟ್ ಪವರ್ ಯುನಿಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಆರು ಅಂತಸ್ತಿನ ಕಟ್ಟಡ ಇದಾಗಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎರಡನೇ ಮಹಡಿಯಲ್ಲಿದ್ದ ಜನರು ಭಯಬೀತರಾಗಿ ಹೊರಗೆ ಓಡಿ ಬಂದಿದ್ದಾರೆ. ಮೂರನೇ ಹಾಗೂ ನಾಲ್ಕನೇ ಮಹಡಿಯಲ್ಲಿದ್ದ ಸಿಬ್ಬಂದಿ ಹಾಗೂ ಜನರು ಅಗ್ನಿಶಾಮಕ ದಳದ ರಕ್ಷಣೆಗೆ ಮೊರೆ ಇಟ್ಟಿದ್ದಾರೆ.
ಬೆಂಕಿಯಿಂದಾಗಿ ಎಲ್ಲೆಡೆ ಹೊಗೆ ತುಂಬಿಕೊಂಡಿದ್ದು, ಸದ್ಯ ಅಗ್ನಿ ಶಾಮಕ ಸಿಬ್ಬಂದಿ, ಹಲಸೂರು ಪೊಲೀಸ್ ಠಾಣಾ ಸಿಬ್ಬಂದಿ ಹಾಗೂ ಸ್ಥಳೀಯರು ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.