ರಾಂಚಿ, ಸೆ 18 (DaijiworldNews/SM): ಒಂದು ದೇಶ, ಒಂದು ಭಾಷೆ ಪರಿಕಲ್ಪನೆಯನ್ನು ಘೋಷಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೀಗ ಯೂ ಟರ್ನ್ ಹೊಡೆದಿದ್ದಾರೆ. ದೇಶದಲ್ಲಿ ಒಂದೇ ಭಾಷೆಯಾಗಿ ಹಿಂದಿ ಹೇರುವಿಕೆಯನ್ನು ನಾನು ಘೋಷಿಸಿಲ್ಲ ಎಂದಿದ್ದಾರೆ. ಅದರ ಬದಲಿಗೆ ಹಿಂದಿಯನ್ನು ದ್ವಿತೀಯ ಭಾಷೆಯಾಗಿಸುವಂತೆ ಸಲಹೆ ನೀಡಿದ್ದೇನೆ ಎಂದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನಾನು ಕೂಡ ಹಿಂದಿಯೇತರ ರಾಝ್ಯದಲ್ಲಿ ಹುಟ್ಟಿ ಬೆಳೆದವನು. ವೈವಿದ್ಯತೆಯಿಂದ ಕೂಡಿರುವ ದೇಶದಲ್ಲಿ ಏಕ ಭಾಷೆಯಾಗಿ ಹಿಂದಿಯನ್ನು ಜಾರಿಗೊಳಿಸುವ ಉದ್ದೇಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನನ್ನ ಹೇಳಿಕೆಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೀರಿ ಈ ಕಾರಣದಿಂದಾಗಿ ದೇಶದಲ್ಲಿ ತಪ್ಪು ಸಂದೇಶ ರವಾನೆಯಾಗಿದೆ ಎಂದು ಅವರು ಹೇಳಿದ್ದಾರೆ. ನನ್ನ ಉದ್ದೇಶ ದೇಶದ ಜನರು ಹಿಂದಿ ಭಾಷೆಯನ್ನು ಎರಡನೆಯ ಭಾಷೆಯನ್ನಾಗಿ ಕಲಿಯಬೇಕೆನ್ನುವುದು ಎಂದರು.
ಇನ್ನು ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಅಮಿತ್ ಶಾ ಒಂದು ದೇಶ ಒಂದು ಭಾಷೆಯ ಪರಿಕಲ್ಪನೆ ಎತ್ತಿದ್ದರು. ಇದರ ಬೆನ್ನಲ್ಲೇ ಸಾಕಷ್ಟು ಪರ ವಿರೋಧಗಳು ಚರ್ಚೆಯಾಗಿದ್ದವು. ಹಿಂದೀಯೇತರ ರಾಜ್ಯಗಳಿಂದ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು. ಇದೀಗ ಎಚ್ಚೆತ್ತ ಕೇಂದ್ರ ಗೃಹ ಸಚಿವರು ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟಪಡಿಸಿದ್ದಾರೆ.