ಬೆಂಗಳೂರು, ಸೆ.19(Daijiworld News/SS): ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಫಿಲಂಸಿಟಿಯನ್ನು ರಾಮನಗರದಿಂದ ರೋರಿಚ್ ಎಸ್ಟೇಟ್ಗೆ ಸ್ಥಳಾಂತರಿಸಲು ಮುಂದಾಗಿದೆ. ಇದೀಗ ಫಿಲಂ ಸಿಟಿಯನ್ನು ರಾಮನಗರದಿಂದ ಸ್ಥಳಾಂತರಿಸಿ ಜೀವವೈವಿಧ್ಯತೆಯ ತಾಣ ಬನ್ನೇರುಘಟ್ಟ ಸಮೀಪದ ದೇವಿಕಾರಾಣಿ-ರೋರಿಚ್ ಎಸ್ಟೇಟ್'ನಲ್ಲಿ ನಿರ್ಮಿಸುವ ಯೋಜನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರ ಯಡಿಯೂರಪ್ಪರ ದ್ವೇಷ-ನಾಶದ ರಾಜಕಾರಣದ ಪ್ರತೀಕವಾಗಿದೆ ಎಂದು ದೂರಿದ್ದಾರೆ.
ರಾಮನಗರದಲ್ಲಿ ಚಿತ್ರನಗರಿ ನಿರ್ಮಿಸಬೇಕೆಂದು ತಮ್ಮ ಸರ್ಕಾರದಲ್ಲಿ ತೀರ್ಮಾನಿಸಲಾಗಿತ್ತು. ಈ ಮೂಲಕ ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಉದ್ದೇಶವಾಗಿತ್ತು. ಆದರೆ ರಾಮನಗರದಿಂದ ರೋರಿಚ್'ಗೆ ಚಿತ್ರನಗರಿಯನ್ನು ಸ್ಥಳಾಂತರಿಸುವ ನಿರ್ಧಾರದ ಮೂಲಕ ಯಡಿಯೂರಪ್ಪ ರಾಮನಗರ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಹೊರವಲಯದಲ್ಲಿ ಅತಿಕ್ರಮಣಕ್ಕೆ ತುತ್ತಾಗದೇ ಜೀವವೈವಿಧ್ಯ ಉಳಿಸಿಕೊಂಡಿರುವ ತಾಣ ರೋರಿಚ್ ಎಸ್ಟೇಟ್. ಈ ತಾಣ ಫಿಲಂಸಿಟಿ ನಿರ್ಮಾಣಕ್ಕೆ ಸೂಕ್ತವಲ್ಲ. ಇಲ್ಲಿ ಚಿತ್ರನಗರಿ ನಿರ್ಮಾಣ ಮಾಡಿದಲ್ಲಿ ಪರಿಸರ ನಾಶದ ಜತೆಗೆ ಮಾನವ ಹಾಗೂ ವನ್ಯಮೃಗಗಳ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎಂದು ಹೇಳಿದ್ದಾರೆ.