ನವದೆಹಲಿ, ಸೆ.19(Daijiworld News/SS): ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದಲ್ಲಿ ಇ-ಸಿಗರೇಟ್ ಮಾರಾಟ, ಉತ್ಪಾದನೆ, ಆಮದು ಮತ್ತು ವಿತರಣೆ ನಿಷೇಧಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಆರೋಗ್ಯಕ್ಕೆ ಮಾರಕವಾದ ಇಲೆಕ್ಟ್ರಾನಿಕ್ ಸಿಗರೇಟ್ಗೆ (ಇ-ಸಿಗರೇಟ್) ಕೇಂದ್ರ ಸರ್ಕಾರ ಸಂಪೂರ್ಣ ನಿರ್ಬಂಧ ಹೇರಿದೆ. ಇದರ ಉತ್ಪಾದನೆ, ಆಮದು, ರಫ್ತು, ಸಾಗಣೆ, ಸಂಗ್ರಹ, ವಿತರಣೆ, ಮಾರಾಟ ಮತ್ತು ಜಾಹೀರಾತನ್ನು ನಿಷೇಧಿಸುವ ಸುಗ್ರೀವಾಜ್ಞೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ಇದು ಜಾರಿಗೆ ಬರಲಿದೆ.
ಧೂಮಪಾನದ ಚಟ ಬಿಡುವುದಕ್ಕೆ ಸಹಕಾರಿ ಎಂದು ಹೇಳಲಾಗುವ ಇ-ಸಿಗರೇಟ್'ಗಳನ್ನು ವಿಶ್ವಾದ್ಯಂತ ಅಪಾಯವಿಲ್ಲದ ಸರಕೆಂದು ಪರಿಗಣಿಸಿ ಮಾರಾಟ ಮಾಡಲಾಗುತ್ತಿದೆ. ಆದರೆ ತಜ್ಞರ ಹೇಳಿಕೆಯ ಪ್ರಕಾರ ಇ-ಸಿಗರೇಟ್'ಗಳೂ ಆರೋಗ್ಯಕ್ಕೆ ಹಾನಿಕಾರಕವೇ ಆಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇ-ಸಿಗರೇಟ್'ಗಳನ್ನು ನಿಷೇಧಿಸಿದೆ.
ನಿಯಮ ಉಲ್ಲಂಘಿಸುವವರಿಗೆ ಒಂದು ವರ್ಷದವರೆಗೆ ಜೈಲು ಮತ್ತು 1 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ತಪ್ಪು ಪುನರಾವರ್ತನೆಯಾದರೆ ಮೂರು ವರ್ಷದವರೆಗೆ ಕಾರಾಗೃಹವಾಸ ಮತ್ತು 5 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಇ-ಸಿಗರೇಟ್ ಸಂಗ್ರಹ ಮಾಡಿದ್ದರೆ ಆರು ತಿಂಗಳ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ವರೆಗೆ ದಂಡ ಇಲ್ಲವೆ ಎರಡನ್ನೂ ವಿಧಿಸಬಹುದಾಗಿದೆ.