ಶಿವಮೊಗ್ಗ, ಸೆ 19 (Daijiworld News/RD): ತ್ರಿವಳಿ ತಲಾಖ್ ನಿಷೇಧದ ಬಳಿಕವು ಪ್ರಕರಣಗಳು ದಾಖಲಾಗುತ್ತಿದ್ದು, ಇದೀಗ ಶಿವಮೊಗ್ಗ ಮೂಲದ ಮಹಿಳೆಗೆ ವಾಟ್ಸಪ್ ನಲ್ಲೇ ತಲಾಖ್ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಆಯಿಶಾ ಸಿದ್ದಿಕಾ ಮತ್ತು ಮುಸ್ತಫಾ ಬೇಗ್ ಶಿವಮೊಗ್ಗ ಜಿಲ್ಲೆಯ ಟ್ಯಾಂಕ್ ಮೊಹಲ್ಲಾ ನಿವಾಸಿಯಾಗಿದ್ದು, ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. 21 ವರ್ಷ ಸಂಸಾರ ನಡೆಸಿದ್ದ ಇವರು,ಇದ್ದಕ್ಕಿಂದಂತೆ ಪತಿರಾಯ ಪತ್ನಿಗೆ ವಾಟ್ಸಪ್ ನಲ್ಲೇ ಮೂರು ಬಾರಿ ತಲಾಕ್ ಎಂದು ಮೆಸೇಜ್ ಮಾಡಿ ವಿಚ್ಛೇದನ ನೀಡಿದ್ದಾನೆ. ಇದರಿಂದ ಮನನೊಂದ ಪತ್ನಿ ಆಯಿಶಾ ನ್ಯಾಯ ಕೊಡಿಸುವಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಳಿಕೊಂಡಿದ್ದಾರೆ.
ಆಯಿಶಾ ನೀಡಿರುವ ದೂರಿನ ಪ್ರಕಾರ, ದುಬೈನಲ್ಲಿ ಸಿಸಿ ಕ್ಯಾಮೆರಾ, ಲ್ಯಾಪ್ ಟಾಪ್ ಟೆಕ್ನಿಶಿಯನ್ ಆಗಿರುವ ಮುಸ್ತಫಾ ವರ್ಷಕ್ಕೆರಡು ಬಾರಿ ಪತ್ನಿ ಹಾಗೂ ದತ್ತು ಮಗಳನ್ನು ನೋಡಲು ಬರುತ್ತಿದ್ದ. ಜತೆಗೆ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದ. ಈ ವರ್ಷ ಜನವರಿಯಲ್ಲಿ ಭಾರತಕ್ಕೆ ಬಂದು ವಾಪಸ್ ಹೋದ ಮೇಲೆ ಪತಿ ವಾಟ್ಸಪ್ನಿಂದ ತಲಾಖ್ ಸಂದೇಶ ಕಳುಹಿಸಿದ್ದಾನೆ. ಇದನ್ನು ನಿರಾಕರಿಸಿ ಪ್ರಶ್ನಿಸಿದಾಗ ಪತಿ ಮತ್ತೆರಡು ಬಾರಿ ತಲಾಖ್ ಸಂದೇಶ ಕಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದರಿಂದ ಕಂಗಲಾದ ಆಯಿಶಾ ತಲಾಖ್ ನೀಡಬೇಡಿ ಎಂದು ಪತಿ ಮುಸ್ತಫಾಗೆ ಅಂಗಲಾಚಿದರೂ ಬೇಡಿಕೊಂಡರು ಆತ ಕೇಳಲಿಲ್ಲ ಎಂದು ಪೊಲೀಸರ ಬಳಿ ತಮ್ಮ ನೋವನ್ನು ಹೇಳಿಕೊಂಡರು. ಈ ಕುರಿತು ಮಾತನಾಡಿದ ಆಯಿಶಾ, ಪ್ರಧಾನಿ ಮೋದಿ ತಲಾಖ್ ನಿಷೇಧ ಕಾನೂನು ಜಾರಿಗೆ ತಂದಿದ್ದಾರೆ. ಆದರೂ ತ್ರಿವಳಿ ತಲಾಖ್ ದುರ್ಬಳಕೆಯಾಗುತ್ತಿದೆ. ನಾನಗೆ ಈ ತಲಾಖ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನಾನು ದೂರು ನೀಡಿದ್ದು, ಪೊಲೀಸರು ನನಗೆ ನ್ಯಾಯ ಕೊಡಿಸಬೇಕು. ಆದರೆ ಪತಿ ದುಬೈನಲ್ಲಿರುವುದರಿಂದ ನಾವೇನೂ ಮಾಡಲು ಸಾಧ್ಯವಿಲ್ಲ. ಈ ಕುರಿತು ನಾನು ನನ್ನ ಪತಿ ಮತ್ತು ವಿದೇಶಾಂಗ ಇಲಾಖೆಗೆ ಟ್ವೀಟ್ ಮಾಡಿ ನ್ಯಾಯ ಕೇಳುತ್ತೇನೆ ಎಂದು ಹೇಳಿದರು.