ಬೆಂಗಳೂರು, ಸೆ 19 (Daijiworld News/RD): ದೇಶೀಯ ಲಘು ಸಮರ ವಿಮಾನ (ಎಲ್ಸಿಎ) ತೇಜಸ್ ಯುದ್ದ ವಿಮಾನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾರಾಟ ನಡೆಸಿದರು. ಈ ಮೂಲಕ ದೇಶದ ರಕ್ಷಣಾ ಸಚಿವರೊಬ್ಬರು ಇದೇ ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಕೀರ್ತಿಗೆ ಭಾಜನರಾದರು.
ಗುರುವಾರ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ಅವರು, ಯುದ್ದ ವಿಮಾನದ ಪೈಲಟ್ ಉಡುಗೆಯಲ್ಲಿ ತೇಜಸ್ ನ ಕೋ ಪೈಲಟ್ ಏರ್ ವೈಸ್ ಮಾರ್ಷಲ್ ಎನ್ ತಿವಾರಿ ಜೊತೆ ಕುಳಿತು ಸಂತಸದಿಂದ ಕೈ ಬೀಸಿ, ಬೆಳಗ್ಗೆ 9 ರಿಂದ 9:30 ರ ತನಕ ಅರ್ಧ ಗಂಟೆಗಳ ಕಾಲ ಆಕಾಶದಲ್ಲಿ ತೇಜಸ್ ಯುದ್ಧ ವಿಮಾನದಲ್ಲಿ ಕೂತು ಹಾರಾಟ ನಡೆಸಿದರು.
ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗಿರುವ ತೇಜಸ್ ವಾಯುಪಡೆ ಕಾರ್ಯಾಚರಣೆಗಳಲ್ಲಿ ಸೇರ್ಪಡೆಯಾಗಲು ಸಜ್ಜಾಗಿದೆ. ಇತ್ತೀಚಿಗಷ್ಟೆ ಈ ವಿಮಾನವು ‘ಅರೆಸ್ಟ್ ಲ್ಯಾಂಡಿಂಗ್’ (ನಿರ್ಬಂಧಿತ ಇಳಿಕೆ) ಪರೀಕ್ಷೆಯಲ್ಲಿ ಯಶಸ್ವಿಯಾಗಿತ್ತು. ಈ ಹಿಂದೆ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನದಲ್ಲಿ ಎರಡು ಸೀಟರ್ ಗಳ ಯುದ್ಧ ವಿಮಾನದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹಾರಾಟ ನಡೆಸಿ ಯುದ್ಧ ವಿಮಾನದ ವೇಗದ ಅನುಭವ ಪಡೆದಿದ್ದರು. ಸುಮಾರು ತೇಜಸ್ ನಾಲ್ಕುವರೆ ತಲೆಮಾರಿನ ಲಘು ಸಮರ ವಿಮಾನವಾಗಿದ್ದು, ಇದನ್ನು ಸರ್ಕಾರಿ ಏರೋಸ್ಪೇಸ್ ಬೆಹೆಮೊಥ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅಭಿವೃದ್ಧಿಪಡಿಸಿದೆ.