ಬೆಂಗಳೂರು, ಸೆ.19(Daijiworld News/SS): ದೇಶೀಯ ನಿರ್ಮಿತ ಹಗುರ ಯುದ್ಧ ವಿಮಾನ ತೇಜಸ್ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ ಮೊದಲ ಬಾರಿಗೆ ಹಾರಾಟ ನಡಸಿದ್ದಾರೆ. ಮಾತ್ರವಲ್ಲ, ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವ ಎಂಬ ಖ್ಯಾತಿ ಪಡೆದ ರಾಜನಾಥ್ ಸಿಂಗ್ ಅವರು ತೇಜಸ್ ಯುದ್ಧ ವಿಮಾನದಲ್ಲಿನ ಹಾರಾಟ ರೋಮಾಂಚಕವಾಗಿತ್ತು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಏರ್ ವೈಸ್ ಮಾರ್ಷಲ್ ಎನ್ ತಿವಾರಿ ಅವರೊಂದಿಗೆ ತೇಜಸ್ ಲಘು ಯುದ್ಧವಿಮಾನದಲ್ಲಿ ಸುಮಾರು 30 ನಿಮಿಷ ಹಾರಾಟ ನಡೆಸಿದ ರಾಜನಾಥ್ ಸಿಂಗ್ ಅವರು ಬಳಿಕ ತಮ್ಮ ಹಾರಾಟದ ಅನುಭವವನ್ನು ಹಂಚಿಕೊಂಡಿದ್ದಾರೆ.
ತೇಜಸ್ ಯುದ್ಧ ವಿಮಾನ ದೇಶೀಯ ನಿರ್ಮಿತ ಲಘು ಯುದ್ಧ ವಿಮಾನವಾಗಿದ್ದು, ಇದೇ ಕಾರಣಕ್ಕೆ ಅದರಲ್ಲಿ ಹಾರಾಟ ನಡೆಸಿ ಅನುಭವ ಪಡೆಯಬೇಕು ಎಂದೆನಿಸಿತ್ತು. ಹೀಗಾಗಿ ಇಂದು ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದೆ. ನಿಜಕ್ಕೂ ಹಾರಾಟದ ಅನುಭವ ರೋಮಾಂಚಕವಾಗಿತ್ತು. ನನ್ನ ಜೀವನದಲ್ಲೇ ಕೆಲ ಅತ್ಯಮೂಲ್ಯ ಕ್ಷಣಗಳಲ್ಲಿ ಇದೂ ಒಂದಾಗಿದೆ ಎಂದು ಹೇಳಿದರು.
ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಈಗ ಭಾರತಕ್ಕೂ ಇದೆ. ಡಿಆರ್ ಡಿಒ ಮತ್ತು ತೇಜಸ್ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲ ಎಂಜಿನಿಯರ್ಗಳಿಗೂ ಧನ್ಯವಾದ. ಎಚ್ ಎಎಲ್ ನ ನಿರ್ಮಾಣ ಅದ್ಭುತ ಎಂದು ಶ್ಲಾಘಿಸಿದರು.