ಲಖನೌ, ಸೆ.19(Daijiworld News/SS): ಮಾತುಕತೆಯ ಮೂಲಕ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದವನ್ನು ಬಗೆಹರಿಸಿಕೊಳ್ಳಬಹುದಿತ್ತು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಅ.18ರೊಳಗೆ ಅಯೋಧ್ಯೆ ವಿವಾದದ ವಿಚಾರಣೆ ಪೂರೈಸಲು ನಿರ್ಧರಿಸಲಾಗಿದೆ ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಅವರು, ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಬದಲು ಮಾತುಕತೆಯ ಮೂಲಕ ಕೋರ್ಟ್ನ ಹೊರಗೆ ಬಗೆಹರಿಸಿಕೊಂಡಿದ್ದರೆ ಒಳ್ಳೆಯದಿತ್ತು ಎಂದು ಹೇಳಿದ್ದಾರೆ.
ರಾಮಜನ್ಮಭೂಮಿ ವಿವಾದವನ್ನು ಸಂಧಾನ ಪ್ರಕ್ರಿಯೆ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಲು ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿತ್ತು. ಈ ಅವಕಾಶ ಬಳಸಿಕೊಂಡು ವಿವಾದ ಪರಿಹಿಸಿಕೊಳ್ಳಲು ಮುಸ್ಲಿಮರು ಮುಂದಾಗಿದ್ದರೆ ಒಳ್ಳೆಯದಿತ್ತು. ಆದರೆ, ಅವರು ಮನಸ್ಸು ಮಾಡಲಿಲ್ಲ ಎಂದು ಹೇಳಿದರು.
ಸಕಾರಾತ್ಮಕ ಚಿಂತನೆಗಳನ್ನು ಹೊಂದಿದ್ದಾಗ ಮಾತ್ರ ಯಾವುದೇ ವಿವಾದವನ್ನು ಬಗೆಹರಿಸಿಕೊಳ್ಳಲು ಸಾಧ್ಯ. ಹಟಮಾರಿ ಧೋರಣೆ ಹೊಂದಿದ್ದರೆ ಆಗ ವಿವಾದ ಬಗೆಹರಿಸಿಕೊಳ್ಳಲು ಸುಪ್ರೀಂಕೋರ್ಟ್ ಅನ್ನು ಅವಲಂಬಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ.
ಈ ಹಿಂದೆ ಕೂಡ ಸುಪ್ರೀಂಕೋರ್ಟ್ನ ಹಲವು ಆದೇಶಗಳನ್ನು ಪಾಲಿಸಿದ್ದೇವೆ. ವಾಸ್ತವಿಕ ಅಂಶಗಳು ಮತ್ತು ಸಾಕ್ಷ್ಯಾಧಾರಗಳನ್ನು ಆಧರಿಸಿ ಸುಪ್ರೀಂಕೋರ್ಟ್ ಕೊಡುವ ತೀರ್ಪನ್ನು ಉತ್ತರ ಪ್ರದೇಶ ಸರ್ಕಾರ ಗೌರವಿಸುತ್ತದೆ. ಅದನ್ನು ಪಾಲಿಸುವ ವಿಶ್ವಾಸವೂ ಇದೆ ಎಂದು ಹೇಳಿದರು.