ಹಾವೇರಿ, ಸೆ 19 (Daijiworld News/RD): ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮೂರು ನಾಲ್ಕು ತಿಂಗಳೊಳಗೆ ಪತನವಾಗುತ್ತದೆ ಎಂದು ಕೋಡಿಹಳ್ಳಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನುಡಿದ ಭವಿಷ್ಯವನ್ನೇ ಪುನರಾವರ್ತಿಸಿರುವ ಕೋಡಿಹಳ್ಳಿ ಶ್ರೀಗಳು ಬಿಎಸ್ ಯಡಿಯೂರಪ್ಪ ಸರಕಾರ ಪತನಗೊಳ್ಳಲಿದೆ ಎಂದು ಹೇಳಿದ್ದಾರೆ. ಈ ಮೊದಲು ದಿಲ್ಲಿಯಲ್ಲಿ ಭವಿಷ್ಯ ನುಡಿದಿದ್ದ ಕೋಡಿಹಳ್ಳಿ ಶ್ರೀಗಳು ರಾಜ್ಯದಲ್ಲಿ ಯಾವುದೇ ಸರಕಾರ ಬಂದರೂ 1 ವರ್ಷ 18 ತಿಂಗಳಲ್ಲಿ ಮತ್ತೆ ಚುನಾವಣೆ ನಡೆಯುತ್ತದೆ ಎಂದು ಮುನ್ಸೂಚನೆ ನೀಡಿದ್ದರು. ಇದೀಗ ಚುನಾವಣೆ ನಡೆದು 1 ವರ್ಷ 14 ತಿಂಗಳೇ ಕಳೆದಿವೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದನ್ನು ನೋಡುವಿರಂತೆ ಎನ್ನುವ ಮೂಲಕ ಕೋಡಿಹಳ್ಳಿ ಶ್ರೀಗಳು ಪರೋಕ್ಷವಾಗಿ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಭವಿಷ್ಯ ನುಡಿಯುವ ಮೂಲಕ ಕುತೂಹಲ ಕೆರಳಿಸಿದ್ದಾರೆ.
ಇನ್ನು ಕಾರ್ತಿಕ ಮಾಸ ಕಳೆಯುವ ವರೆಗೆ ಮತ್ತೆ ಪ್ರವಾಹ ಭೀತಿ ಎದುರಾಗಲಿದೆ. ರೋಗರುಜಿನಗಳು ಹೆಚ್ಚುತ್ತವೆ, ಜನಗಳಲ್ಲಿ ಹಾಹಾಕಾರ ಮನೋಭಾವ ಹೆಚ್ಚುತ್ತದೆ, ನಿರಾಶ್ರಿತರು ಸಂಕಷ್ಟದಲ್ಲಿ ಸಿಲುಕುತ್ತಾರೆ ಎಂದರು. ಜೊತೆಗೆ ಈ ಹಿಂದೆ ಮೂರು ಮಾತುಗಳನ್ನು ಹೇಳಿದ್ದೆ. ಜಲದಿಂದ, ಭೂಮಿಯಿಂದ ಮತ್ತು ಗಾಳಿಯಿಂದ ತೊಂದರೆಗಳಾಗುತ್ತವೆ ಎಂದು. ಅದರಂತೆ ಪ್ರವಾಹವಾಯಿತು, ಬೆಟ್ಟ ಗುಡ್ಡಗಳು ಕುಸಿಯುತ್ತಿವೆ, ಎರಡು ಮೂರು ವಿಮಾನಗಳು ಪತನಗೊಂಡವು. ನಭೋಮಂಡಲದಲ್ಲು ತೊಂದರೆ ಇದೆ ಎಂದು ಹೇಳಿದ್ದೆ. ಅದರಂತೆ ಚಂದ್ರಯಾನ 2 ಯೋಜನೆ ವಿಫಲಗೊಂಡಿದೆ ಎಂದು ಹೇಳಿದರು.