ಬೆಂಗಳೂರು, ಸೆ.20(Daijiworld News/SS): ನೂತನ ನೀತಿಯಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಣೆ ಹಾಗೂ ಉದ್ಯೋಗವಕಾಶಗಳ ಸೃಷ್ಟಿಗೆ ಆದ್ಯತೆ ನೀಡಲಾಗುತ್ತಿದ್ದು, ಆಧುನಿಕ ತಂತ್ರಜ್ಞಾನಗಳ ಕಂಪನಿಗಳನ್ನು ಉತ್ತೇಜಿಸಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಶೀಘ್ರದಲ್ಲಿಯೇ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನದಲ್ಲಿ ಹೆಚ್ಚಿನ ಉದ್ಯೋಗವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ನೂತನ ಮಾಹಿತಿ ತಂತ್ರಜ್ಞಾನ ನೀತಿಯನ್ನು ಜಾರಿಗೆ ತರಲಾಗುವುದು. ನೂತನ ನೀತಿಯಲ್ಲಿ ಹೆಚ್ಚಿನ ಹೂಡಿಕೆ ಆಕರ್ಷಣೆ ಹಾಗೂ ಉದ್ಯೋಗವಕಾಶಗಳ ಸೃಷ್ಟಿಗೆ ಆದ್ಯತೆ ನೀಡಲಾಗುತ್ತಿದೆ. ಈ ಮೂಲಕ ಆಧುನಿಕ ತಂತ್ರಜ್ಞಾನಗಳ ಕಂಪನಿಗಳನ್ನು ಉತ್ತೇಜಿಸಲಾಗುವುದು ಎಂದು ಭರವಸೆ ನೀಡಿದರು.
ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ ಮತ್ತಿತರ ಎರಡನೇ ಹಂತದ ನಗರಗಳಲ್ಲಿ ಐಟಿ ಉದ್ಯಮಗಳನ್ನು ವಿಸ್ತರಿಸಲಾಗುವುದು. ಮಾತ್ರವಲ್ಲ, ಕಂಪನಿ ಸ್ಥಾಪಿಸಲು ಮುಂದೆ ಬರುವವರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಲಾಗುವುದು. ಸ್ಟಾರ್ಟ್ ಆಪ್ ಕಂಪನಿಗಳ ಪ್ರಗತಿಗಾಗಿ ನೂತನ ಅನ್ವೇಷಣಾ ಪ್ರಾಧಿಕಾರ ಹಾಗೂ ವಿಷನ್ ಗ್ರೂಪ್ ರಚನೆ ಸಹ ನೂತನ ನೀತಿಯಲ್ಲಿದೆ ಎಂದು ತಿಳಿಸಿದರು.
ಇದೇ ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಉದ್ಯಮಿಗಳಿಗೆ ಸರಕಾರದಿಂದ ನೀಡುತ್ತಿರುವ ಸಾಲದ ಸಬ್ಸಿಡಿಯನ್ನು ಶೇ. 50ರಿಂದ 75ಕ್ಕೆ ಏರಿಕೆ ಮಾಡಲು ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.