ಹೊಸದಿಲ್ಲಿ, ಸೆ.20(Daijiworld News/SS): ಒಂದು ವಾರಗಳ ಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದು, ಹೊರ ದೇಶಗಳ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ನರೇಂದ್ರ ಮೋದಿ ಅಮೆರಿಕ ಭೇಟಿಯ ಸಂದರ್ಭದಲ್ಲಿ ಮೋದಿ ಅವರು ಹೂಸ್ಟನ್ ಮತ್ತು ನ್ಯೂಯಾರ್ಕ್ಗೆ ಭೇಟಿ ನೀಡಲಿದ್ದಾರೆ. ಮಾತ್ರವಲ್ಲ, ಈ ತಿಂಗಳ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 2014ರ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಭಾಷಣ ಮಾಡುವುದು ವಿಶೇಷ.
ಸೆ.22 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯ ಸಮುದಾಯವನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಪಸ್ಥಿತರಿರಲಿದ್ದಾರೆ. ಅಮೆರಿಕ ಭೇಟಿಯ ಸಂದರ್ಭದಲ್ಲಿ ಮೋದಿ ಅವರಿಗೆ ಬಿಲ್ ಮತ್ತು ಮಿಲಿಂದಾ ಗೇಟ್ಸ್ ಪ್ರತಿಷ್ಠಾನದ ಗ್ಲೋಬಲ್ ಗೋಲ್ ಕೀಪರ್ಸ್ ಪ್ರಶಸ್ತಿ ದೊರಕಲಿದೆ. ಸ್ವಚ್ಛ ಭಾರತ ಅಭಿಯಾನದ ಮೂಲಕ ನೈರ್ಮಲ್ಯ ಕಾಪಾಡಲು ನಾಯಕತ್ವ ವಹಿಸಿಕೊಂಡಿರುವುದಕ್ಕಾಗಿ ಈ ಪ್ರಶಸ್ತಿ ಮೋದಿಯ ಮುಡಿಗೇರಲಿದೆ.
ವಿಶೇಷವೆಂದರೆ ಮಹಾತ್ಮಾಗಾಂಧಿ ಅವರ 150ನೇ ಜನ್ಮದಿನದ ಸ್ಮರಣಾರ್ಥ ಸೆ.24 ರಂದು ವಿಶ್ವಸಂಸ್ಥೆಯಲ್ಲಿಯೂ ಭಾರತ ಕಾರ್ಯಕ್ರಮವೊಂದನ್ನು ಆಯೋಜಿಸಿದೆ ಎಂದು ಮೂಲಗಳು ತಿಳಿಸಿದೆ.