ಶ್ರೀನಗರ, ಸೆ.20(Daijiworld News/SS): ಕಣಿವೆ ರಾಜ್ಯ ಸಾಮಾನ್ಯ ಸ್ಥಿತಿಗೆ ಮರಳದಂತೆ ಆತಂಕ ಸೃಷ್ಟಿಸಲು ಪಾಕ್ನ ಕುಮ್ಮಕ್ಕಿನಿಂದ ಉಗ್ರರು ಬೆದರಿಕೆಯೊಡ್ಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಆರ್ಟಿಕಲ್ 370 ರದ್ದು ನಿರ್ಧಾರದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ವ್ಯಾಪಕ ಭದ್ರತೆಯನ್ನು ಕೈಗೊಳ್ಳಲಾಗಿದೆ. ಹಲವಡೆ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು ಸೂಕ್ಷ್ಮ ಪ್ರದೇಶಗಳಲ್ಲಿ ಮಾತ್ರ ನಿರ್ಬಂಧ ಮುಂದುವರಿಸಲಾಗಿದೆ. ಈ ನಡುವೆ ಭದ್ರತಾ ಸಿಬಂದಿಗಳ ಕಣ್ಣು ತಪ್ಪಿಸಿ ಕಾಶ್ಮೀರದ ವಾಣಿಜ್ಯ ಪ್ರದೇಶಗಳಿಲ್ಲಿ ಉಗ್ರಗಾಮಿಗಳು ವ್ಯಾಪರಸ್ಥರಿಗೆ ಅಂಗಡಿ - ಮುಗ್ಗಟ್ಟು ತೆರೆಯದಂತೆ ಬೆದರಿಕೆ ಒಡ್ಡುತ್ತಿದ್ದಾರೆ.
ಸಹಜ ಸ್ಥಿತಿಯತ್ತ ನಿಧಾನವಾಗಿ ಮರಳುತ್ತಿರುವ ಕಾಶ್ಮೀರದ ವಾಣಿಜ್ಯ ಪ್ರದೇಶಗಳಲ್ಲಿ ಶಸ್ತ್ರಗಳನ್ನು ಹಿಡಿದ ಉಗ್ರರು ನುಗ್ಗಿ ಈ ಕೃತ್ಯ ಎಸಗುತ್ತಿದ್ದು, ರಸ್ತೆ ಬದಿಯ ಗೋಡೆಗಳ ಮೇಲೆ ವ್ಯಾಪಾರ ನಡೆಸದಂತೆ ಎಚ್ಚರಿಕೆಯ ಪೋಸ್ಟರ್ಗಳನ್ನು ಅಂಟಿಸುತ್ತಿದ್ದಾರೆ ಎನ್ನಲಾಗಿದೆ.
ಮುಂಜಾಗರೂಕತಾ ಕ್ರಮವಾಗಿ ಜಮ್ಮು- ಕಾಶ್ಮೀರದಲ್ಲಿ ಭದ್ರತೆ ಬಿಗಿಗೊಳಿಸಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಮಾತ್ರವಲ್ಲ, ಈಗಾಗಲೇ ಕಾಶ್ಮೀರಿ ರಾಜಕೀಯ ಪಕ್ಷಗಳ ನಾಯಕರು ಬಂಧನದಲ್ಲಿದ್ದಾರೆ.