ಬೆಂಗಳೂರು, ಸೆ.20(Daijiworld News/SS): ಚಂದ್ರನ ದಕ್ಷಿಣ ಧ್ರುವ ಭಾಗದಲ್ಲಿ ಕ್ರ್ಯಾಶ್ ಲ್ಯಾಂಡಿಂಗ್ ಆಗಿರುವ ವಿಕ್ರಂ ಲ್ಯಾಂಡರ್ ನೌಕೆಯ ಜೊತೆ ಸಂವಹನ ಸಾಧಿಸಲು ಇಸ್ರೋ ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ.
ಚಂದ್ರನ ನೆಲದಲ್ಲಿ ತನ್ನ ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್ ಮಾಡುವ ಇಸ್ರೋ ವಿಜ್ಞಾನಿಗಳ ಪ್ರಯತ್ನ ಕೊನೇ ಕ್ಷಣದಲ್ಲಿ ವಿಫಲವಾಗಿತ್ತು. ಮತ್ತು ವಿಕ್ರಂ ನೌಕೆ ಇಸ್ರೋ ನಿಯಂತ್ರಣ ಕೇಂದ್ರದ ನಿಗಾದಿಂದ ತಪ್ಪಿಸಿಕೊಂಡಿತ್ತು. ಆದರೆ, ಆ ಕ್ಷಣದಿಂದ ವಿಕ್ರಂ ಜೊತೆ ಸಂವಹನ ಸಾಧಿಸಲು ವಿಜ್ಞಾನಿಗಳು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದರೂ ಕೂಡ ಇಲ್ಲಿವರೆಗೆ ಸಂಪರ್ಕಕ್ಕೆ ಲಭ್ಯವಾಗಿಲ್ಲ.
ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆ ಚಂದ್ರಯಾನ-2ರಿಂದ ಇಲ್ಲಿವರೆಗೆ ಚಂದ್ರನ ನೂರಾರು ಭಾವಚಿತ್ರಗಳು, ಹೊಸ ವೈಜ್ಞಾನಿಕ ಸಂಶೋಧನೆ ನಡೆದು ಶುಕ್ರವಾರಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಭೂಮಿಯೊಂದಿಗೆ ಸಂಪರ್ಕ ಕಡಿತಗೊಳಿಸಿಕೊಂಡ ವಿಕ್ರಂ ಲ್ಯಾಂಡರ್ ಇಲ್ಲಿವರೆಗೆ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಚಂದ್ರಯಾನ-2ರ ಆರ್ಬಿಟರ್ ಭಾವಚಿತ್ರ, ಇದೀಗ ನಾಸಾ ಆರ್ಬಿಟರ್ ಭಾವಚಿತ್ರದಲ್ಲೂ ಪತ್ತೆಯಾಗದ ಲ್ಯಾಂಡರ್ ಆಯಸ್ಸು ಇಂದಿಗೆ ಮುಕ್ತಾಯವಾಗಲಿದೆ.
ಈ ನಡುವೆ ಚಂದ್ರನ ಸುತ್ತಲಿನ ತನ್ನ ಕಕ್ಷೆಯಲ್ಲಿ ಆರ್ಬಿಟರ್ ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಆದರೆ ವಿಕ್ರಂ ಲ್ಯಾಂಡರ್ ಜತೆ ಪುನಃ ಸಂಪರ್ಕ ಸಾಧಿಸುವ ಕೊನೆಯ ಹಂತದ ಪ್ರಯತ್ನಗಳು ಬಹುತೇಕ ಕ್ಷೀಣಿಸುತ್ತಿವೆ ಎಂಬ ಸುಳಿವು ನೀಡಿದೆ.
ಆರ್ಬಿಟರ್ ಚಂದ್ರನ ಮೇಲೆ ತನಗೆ ವಹಿಸಿರುವ ಅನೇಕ ಕಾರ್ಯಗಳನ್ನು ನಿರ್ವಹಿಸಲಿದೆ. ಇದರಿಂದ ಇಸ್ರೋ ಮಹತ್ವದ ಅಧ್ಯಯನಗಳನ್ನು ನಡೆಸಲು ನೆರವಾಗಲಿದೆ. ಪೇಲೋಡ್ಗಳ ಪ್ರಯೋಗ ಯಶಸ್ವಿ ಅರ್ಬಿಟರ್ನಲ್ಲಿರುವ ಎಲ್ಲ ಪೇಲೋಡ್ಗಳು ಚಾಲನೆ ಪಡೆದುಕೊಂಡಿವೆ. ಪೇಲೋಡ್ಗಳನ್ನು ಪರೀಕ್ಷಿಸುವ ಪ್ರಾರಂಭಿಕ ಪ್ರಯತ್ನಗಳು ನಡೆದಿದ್ದು, ಚಂದ್ರನ ಮೇಲೆ ಪ್ರಯೋಗಗಳನ್ನು ನಡೆಸುವ ಪರೀಕ್ಷಾರ್ಥ ಪ್ರಯೋಗಗಳು ಯಶಸ್ವಿಯಾಗಿವೆ. 'ಆರ್ಬಿಟರ್ನ ಎಲ್ಲ ಪೇಲೋಡ್ಗಳ ಪ್ರದರ್ಶನಗಳು ತೃಪ್ತಿದಾಯಕವಾಗಿವೆ' ಎಂದು ಇಸ್ರೋ ತಿಳಿಸಿದೆ.