ನವದೆಹಲಿ, ಸೆ.20(Daijiworld News/SS): ಬಿಜೆಪಿ ಸರ್ಕಾರ ಎಲ್'ಐಸಿಯಂತಹ ಕಂಪನಿಗಳನ್ನು ನಷ್ಟದ ಅಂಚಿಗೆ ತಳ್ಳುವ ಮೂಲಕ ಜನರ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ 4, 557 ಹಾಗೂ ಎಲ್.ಐ.ಸಿಗೆ 4743 ಕೋಟಿ ರೂ. ಬಂಡವಾಳ ಆದ್ಯತಾ ಪ್ರಸ್ತಾವಕ್ಕೆ ಐಡಿಬಿಐ ಬ್ಯಾಂಕಿನ ನಿರ್ದೇಶಕರುಗಳ ಮಂಡಳಿ ಅನುಮೋದನೆ ನೀಡಿದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ, ಸರ್ಕಾರದ ನೀತಿಗಳನ್ನು ಪ್ರಶ್ನಿಸಿದ್ದಾರೆ. ಮಾತ್ರವಲ್ಲ, ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಉತ್ತಮ ಭವಿಷ್ಯಕ್ಕಾಗಿ ಜನಸಾಮಾನ್ಯರು ಶ್ರಮಪಟ್ಟು ಎಲ್'ಐಸಿಯಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಎಲ್'ಐಸಿಯಂತಹ ಕಂಪನಿಗಳನ್ನು ನಷ್ಟದ ಅಂಚಿಗೆ ತಳ್ಳುವ ಮೂಲಕ ಜನರ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. ಇದು ಯಾವ ರೀತಿಯ ನೀತಿಯದ್ದಾಗಿದೆ. ಇದು ಕೇವಲ ನಷ್ಟದ ನೀತಿಯೆ...?ಎಂದು ಪ್ರಶ್ನಿಸಿದ್ದಾರೆ.
ಭಾರತೀಯ ಜೀವ ವಿಮಾ ನಿಗಮ ಕಳೆದ ಎರಡೂವರೆ ತಿಂಗಳಲ್ಲಿ 57 ಸಾವಿರ ಕೋಟಿ ರೂ. ನಷ್ಟ ಹೊಂದಿದ್ದು, ಜನರು ಈ ಸಂಸ್ಥೆ ಮೇಲೆ ಇಟ್ಟಿದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಶ್ರಮಪಟ್ಟು ಗಳಿಸಿದ ಆದಾಯವನ್ನು ಇದರಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.