ಪಣಜಿ, ಸೆ 20(Daijiworld News/RD): ಕುಸಿಯುತ್ತಿರುವ ದೇಶದ ಆರ್ಥಿಕತೆಯ ಚೇತರಿಕೆಗೆ ಕೇಂದ್ರ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ದೇಶಿಯ ಸಂಸ್ಥೆಗಳಿಗೆ ವಿಧಿಸುವ ಕಾರ್ಪೋರೇಟ್ ತೆರಿಗೆಯನ್ನು ಶೇ.22ಕ್ಕೆ ಇಳಿಕೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಗೋವಾ ರಾಜಧಾನಿ ಪಣಜಿಯಲ್ಲಿ ನಡೆದ 37ನೇ ಜಿಎಸ್ಟಿ ಸಭೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, “ವಹಿವಾಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಾವು ಈ ಕ್ರಮ ಕೈಗೊಂಡಿದ್ದೇವೆ. ದೇಶಿಯ ಸಂಸ್ಥೆಗಳಿಗೆ ವಿಧಿಸುವ ತೆರಿಗೆಯನ್ನು ಶೇ.22ಕ್ಕೆ ಇಳಿಕೆ ಮಾಡಲಾಗಿದೆ. ಈ ಕ್ರಮದಿಂದ ವರ್ಷಕ್ಕೆ ಸರ್ಕಾರಕ್ಕೆ ಬರುವ ತೆರಿಗೆಯಲ್ಲಿ 1.45 ಲಕ್ಷ ಕೋಟಿ ರೂ. ಕಡಿತಗೊಳ್ಳುವ ಸಾಧ್ಯತೆ ಇದೆ,” ಎಂದರು. ಶೇ.22 ತೆರಿಗೆಯ ಮೇಲೆ ಸೆಸ್ ಸೇರಿದರೆ ದೇಶಿಯ ಸಂಸ್ಥೆಗಳು ಶೇ.25.17 ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಶೇ.30 ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ.22.2ಕ್ಕೆ ಇಳಿಸಲಾಗಿದೆ. ಈ ಹಿಂದೆ ಕಾರ್ಪೋರೇಟ್ ತೆರಿಗೆ, ಸೆಸ್, ಸಚಾರ್ಜ್ ಸೇರಿ ಶೇ.35 ಆಗುತಿತ್ತು. ಈಗ ಇದೆಲ್ಲ ಸೇರಿ ಶೇ.25.2ಕ್ಕೆ ಇಳಿಕೆಯಾಗಿದೆ. ಆಕ್ಟೋಬರ್ 1 ರಿಂದ ಆರಂಭವಾದ ಹೊಸ ಸಂಸ್ಥೆಗಳಿಗೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಶೇ.25 ರಿಂದ 15ಕ್ಕೆ ಕಡಿಮೆ ಮಾಡಲಾಗಿದೆ. ಈ ತೆರಿಗೆ ದರ ಈ ವರ್ಷದ ಏಪ್ರಿಲ್ 1 ರಿಂದಲೇ ಜಾರಿಯಾಗಲಿದೆ ಎಂದು ಹೇಳಿದರು. ಮೇಕ್ ಇನ್ ಇಂಡಿಯಾ ಯೋಜನೆಗೆ ಇದು ನೆರವಾಗಲಿದೆ ಮತ್ತು ಉದ್ಯೋಗಾವಕಾಶ ಹಾಗೂ ಆರ್ಥಿಕ ಚೇತರಿಕೆಗೆ ಸ್ಫೂರ್ತಿ ನೀಡಲಿದೆ ಎಂದಿದ್ದಾರೆ.
ಹೇಳಿಕೆಯ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ ಪ್ರಗತಿ ಕಂಡಿ ಬಂದಿದ್ದು, ಸೆನ್ಸೆಕ್ಸ್ ಸುಮಾರು 1,900 ಅಂಕ ಜಿಗಿತ ಕಡಿದೆ. ನಿಫ್ಟಿ ಇತಿಹಾಸದಲ್ಲಿ ಅತಿ ಹೆಚ್ಚು ಏರಿಕೆ ಕಂಡಿದೆ. ಒಂದೇ ದಿನದಲ್ಲಿ ನಿಫ್ಟಿ 524 ಅಂಕ ಏರಿಕೆಯಾಗಿದೆ. ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 38,021 ಅಂಶ, ನಿಫ್ಟಿ 11, 273 ಅಂಶ ಏರಿಕೆಯಾಗಿದೆ. 2009ರ ನಂತರ ಒಂದೇ ದಿನದಲ್ಲಿ ಸೆನ್ಸೆಕ್ಸ್ ಅತಿ ಹೆಚ್ಚು ಏರಿಕೆಯಾಗಿದೆ.