ಹಾವೇರಿ, ಸೆ 20 (Daijiworld News/RD): ರಾಜ್ಯದ ಬಿಜೆಪಿ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಭೀಕರ ಪ್ರವಾಹದಿಂದ ಅಪಾರ ನಷ್ಟ ಸಂಭವಿಸಿದ್ದರು ನಯಾ ಪೈಸೆ ಕೂಡ ಕೇಂದ್ರ ಸರ್ಕಾರದಿಂದ ಬಂದಿಲ್ಲ ಹೀಗಾಗಿ ಕಾಂಗ್ರೆಸ್ ಪಕ್ಷ 24 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಹಾವೇರಿಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಮೇಲೆ ನಮಗೆ ಗೌರವವಿದೆ. ಅವರನ್ನು ಪ್ರಧಾನಿಯವರು ನಡೆಸಿಕೊಳ್ಳುವ ರೀತಿ ಸರಿಯಿಲ್ಲ. ನಮ್ಮ ರಾಜ್ಯದ ಜನತೆಯನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯವರಿಗೆ ಪ್ರಧಾನಿಯವರನ್ನು ಭೇಟಿಯಾಗಲು ಸಮಯಾವಕಾಶ ಸಿಗದೆ ಇರುವುದು ರಾಜ್ಯದ ಜನತೆಗೆ ಮಾಡುವ ಅವಮಾನ ಎಂದರು.
ಬಿಜೆಪಿ ಸರ್ಕಾರ ಬಡವರ ಯೋಜನೆಗಳನ್ನು ನಿಲ್ಲಿಸುತ್ತಿದ್ದು, ತಮ್ಮ ಸ್ವಾರ್ಥಕ್ಕೆ ಜನರನ್ನು ಬಲಿ ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ಜಾರಿಗೊಳಿಸಿದ್ದು, ಇದು ಜನ ವಿರೋಧಿಯಾಗಿದೆ. ಈ ರೀತಿಯಾಗಿ ಎಲ್ಲದಕ್ಕೂ ತೆರಿಗೆ, ಎಲ್ಲದಕ್ಕೂ ಶಿಕ್ಷೆ, ವಿಧಿಸುವ ಮೂಲಕ ಕೇಂದ್ರ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಪಾಕಿಸ್ತಾನವನ್ನು ಭಾರತಕ್ಕೆ ಸೇರಿಸುತ್ತೇವೆ ಎಂಬ ಈಶ್ವರಪ್ಪ ಹೇಳಿಕೆಗೆ ಖಾದರ್ ತಿರುಗೇಟು ನೀಡಿರುವ ಅವರು, ಆದರೆ, ಅದನ್ನು ಮೊದಲು ಮಾಡಿ ತೋರಿಸಲಿ. ಅದನ್ನು ಬಿಟ್ಟು ಚುನಾವಣೆ ಅಸ್ತ್ರವಾಗಿ ಉಪಯೋಗಿಸಿಕೊಳ್ಳುವುದು, ಸೇರಿಸುತ್ತೇನೆ ಎನ್ನುತ್ತಲೇ ಅಲ್ಲಿ ಹೋಗಿ ಬಿರಿಯಾನಿ ತಿಂದು ಬರುವುದು ಬೇಡ ಎಂದು ವ್ಯಂಗ್ಯ ಮಾಡಿದರು.