ಪಣಜಿ, ಸೆ 20(DaijiworldNews/SM): ಕಾರ್ಪೊರೇಟ್ ತೆರಿಗೆ ಕಡಿತಗೊಳಿಸುವ ಮೂಲಕ ದೇಶದ ಜನತೆಗೆ ಮೋದಿ ಸರಕಾರ ಗುಡ್ ನ್ಯೂಸ್ ನೀಡಿತ್ತು. ಇದೀಗ ಮತ್ತೊಂದು ಖುಷಿಯ ವಿಚಾರ ಘೋಷಿಸಲಾಗಿದೆ. ಚಿನ್ನಾಭರಣ, ಆಟೋಮೊಬೈಲ್ ಮತ್ತು ಹೋಟೆಲ್ ರೂಂಗಳ ಮೇಲಿನ ತೆರಿಗೆ ದರ ಇಳಿಸಲಾಗಿದೆ ಎಂದು ಸರಕು ಮತ್ತು ಸೇವಾ ತೆರಿಗೆ ಮಂಡಳಿ ಘೋಷಿಸಿದೆ.
37ನೇ ಜಿಎಸ್ ಟಿ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಂದು ಸಾವಿರದ ಒಂದು ರೂಪಾಯಿಯಿಂದ ಏಳು ಸಾವಿರದ ಐದು ನೂರು ರೂಪಾಯಿಗಳವರೆಗಿನ ದರ ಪಟ್ಟಿಯ ಹೋಟೆಲ್ ಕೊಠಡಿಗಳ ಮೇಲಿದ್ದ ಶೇ. 18ರಷ್ಟು ಜಿಎಸ್ಟಿ ಅನ್ನು ಶೇ. 12ಕ್ಕೆ ಇಳಿಸಲಾಗಿದೆ ಎಂದಿದ್ದಾರೆ.
ಇನ್ನು ಒಂದು ಸಾವಿರ ರೂ ಒಳಗಿನ ದರವಿರುವ ಕೊಠಡಿಗಳ ಮೇಲೆ ಯಾವುದೇ ಜಿಎಸ್ಟಿ ವಿಧಿಸುವುದಿಲ್ಲ ಎಂದಿದ್ದಾರೆ. 1001 ರೂಪಾಯಿಯಿಂದ 7500 ರೂಪಾಯಿವರೆಗಿನ ದರದ ಹೋಟೆಲ್ ಕೋಣೆಗಳಿಗೆ ಶೇ. 12ರಷ್ಟು ಮತ್ತು 7,501 ರೂ. ಮೇಲ್ಪಟ್ಟ ದರಗಳ ಕೊಠಡಿಗಳಿಗೆ ಶೇ. 18ರಷ್ಟು ಜಿಎಸ್ ಟಿ ಪಾವತಿಸಬೇಕಾಗಿದೆ ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ.