ಬೆಂಗಳೂರು, ಸೆ.21(Daijiworld News/SS): ಬಡ ವ್ಯಾಪಾರಿಗಳಿಗೆ ಸರಿಯಾಗಿ ಸರ್ಕಾರದ ಯೋಜನೆಯ ಪ್ರಯೋಜನಗಳು ತಲುಪುತ್ತಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಇದ್ದ ಮೈತ್ರಿ ಸರ್ಕಾರದ ಜನಪರ ಯೋಜನೆಗಳನ್ನು ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮಗೆ ದ್ವೇಷ ಇದ್ದುದು ನನ್ನ ಮೇಲಲ್ಲವೆ ಯಡಿಯೂರಪ್ಪನವರೆ..? ಆದರೆ, ಬಡವರ ಮೇಲೇಕೆ ಕೋಪ.? ಎಂದು ಪ್ರಶ್ನಿಸಿದ್ದಾರೆ.
ಬಡವರ ಬಂಧು ಯೋಜನೆ ಕುಂಟುತ್ತಿರುವುದರ ವಿರುದ್ಧ ಟ್ವೀಟ್ ಮೂಲಕ ಕಿಡಿಕಾರಿರುವ ಅವರು, ಮೀಟರ್ ಬಡ್ಡಿದಾರರಿಂದ ಬಡ ಬೀದಿ ಬದಿ ವ್ಯಾಪಾರಿಗಳನ್ನು ಮುಕ್ತಗೊಳಿಸಲು ಮೈತ್ರಿ ಸರ್ಕಾರ ಬಡವರ ಬಂಧು ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆ ಮುಂದುವರಿಸುವ ಬಗ್ಗೆ ಬಿಜೆಪಿ ಸರ್ಕಾರ ಯಾವುದೇ ಸೂಚನೆ ನೀಡಿಲ್ಲ. ಆದಕಾರಣ ಬಡ ವ್ಯಾಪಾರಿಗಳಿಗೆ ಯೋಜನೆ ಪ್ರಯೋಜನ ತಲುಪುತ್ತಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಅಧಿಕಾರಕ್ಕೆ ಬಂದ ದಿನ ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದ ನೀವು ಈಗೇಕೆ ಈ ರೀತಿ ವರ್ತಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪರೇಷನ್ ಕಮಲ ಕುಖ್ಯಾತಿಯ ಬಿ.ಎಸ್.ಯಡಿಯೂರಪ್ಪ ಮತ್ತೊಂದು ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ. ಬಹುಮತ ಸರ್ಕಾರ ನಿಗದಿಪಡಿಸಿದ್ದ ಕ್ಷೇತ್ರಗಳ ಅಭಿವೃದ್ಧಿಯ ಅನುದಾನವನ್ನು ಕಡಿತ ಮಾಡಿ ಪಕ್ಷಪಾತಿ ನಿಲುವನ್ನು ಪ್ರತಿಪಾದಿಸಿದ್ದಾರೆ. ಅಗತ್ಯವಿದ್ದರೆ ಮತ್ತಷ್ಟು ನೀಡಲಿ. ಕೊಟ್ಟದ್ದನ್ನು ಕಿತ್ತುಕೊಳ್ಳುವುದು ಯಾವ ನ್ಯಾಯ..? ಇದು ನಾಚಿಕೆಗೇಡಿನ ರಾಜಕೀಯ ಎಂದು ಆರೋಪಿಸಿದ್ದಾರೆ.