ಚಿಕ್ಕಮಗಳೂರು, ಸೆ.21(Daijiworld News/SS): ವಿಧಾನಸಭಾ ಚುನಾವಣೆ ಯಾವಾಗ ಬರುತ್ತದೆ ಎಂದು ಹೇಳುವುದಕ್ಕೆ ಆಗಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಎಷ್ಟು ದಿನ ಅಧಿಕಾರದಲ್ಲಿ ಇರುತ್ತದೆ ಅಂತ ನನಗೆ ಗೊತ್ತಿಲ್ಲ. 2020ರ ಜನವರಿ, ಫೆಬ್ರವರಿ, ಏಪ್ರಿಲ್, ಮೇ… ಹೀಗೆ ಯಾವಾಗ ಬೇಕಾದರೂ ಚುನಾವಣೆ ನಡೆಯಬಹುದು. ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದವರು ಬದುಕುತ್ತಾರಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಿರುದ್ಧ ಕಿಡಿಕಾರಿದ ಅವರು, ಈ ಭಾಗದ ಸಚಿವ ಅವನೆಷ್ಟೋ ಗ್ರಾಮಗಳನ್ನು ದತ್ತು ಪಡೆದಿದ್ದಾನಂತೆ. ಅವನು ದತ್ತು ಪಡೆದಿದ್ದನ್ನು ಇನ್ನೊಬ್ಬರಿಗೆ ಯಾಕೆ ಹೇಳುತ್ತಾನೆ. ಮೊದಲು ಅವರು ನೆರೆಪೀಡಿತ ಗ್ರಾಮಗಳನ್ನು ದತ್ತು ಪಡೆಯಲಿ ನೋಡೋಣ. ನೀವು ಅಂತವರನ್ನೇ ಆಯ್ಕೆ ಮಾಡಿ ವಿಧಾನ ಸೌಧಕ್ಕೆ ಕಳುಹಿಸುತ್ತೀರಿ. ಅದಕ್ಕೆ ನಾವು ಏನು ಮಾಡುವುದಕ್ಕೆ ಆಗುತ್ತೆ ಹೇಳಿ ಎಂದು ಪ್ರಶ್ನಿಸಿದರು.
ಏಪ್ರಿಲ್ನಲ್ಲಿ ಸಿ.ಟಿ.ರವಿ ಅವರಿಗೆ ಭಾರೀ ಆಘಾತ ಕಾದಿದೆ. ಕೇವಲ ಭಾವನಾತ್ಮಕ ವಿಚಾರಗಳ ಮೂಲಕವೇ ದೇಶವನ್ನು ಆಳಲು ಸಾಧ್ಯವಿಲ್ಲ. ಹಿಂದುತ್ವ, ರಾಮ ಮಂದಿರ, ಕಾಶ್ಮೀರ, ಪಾಕಿಸ್ತಾನ ಇಂತಹ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಾರೆ ಎಂದು ದೂರಿದರು.