ನವದೆಹಲಿ, ಸೆ 21 (Daijiworld News/RD): ರಾಜಧಾನಿ ದೆಹಲಿ ರೈತರ ಮತ್ತೊಂದು ಮೆಗಾ ರ್ಯಾಲಿಗೆ ವೇದಿಕೆಯಾಗಲಿದ್ದು, ಸುಮಾರು 15 ಸಾವಿರಕ್ಕೂ ಅಧಿಕ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತ್ ಕಿಸಾನ್ ಯೂನಿಯನ್ ಒಕ್ಕೂಟದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಬ್ಬು ಬೆಳಗಾರರ ಬಾಕಿ ಪಾವತಿ, ಬೇಷರತ್ ಸಾಲ ಮನ್ನಾ, ಉತ್ತರ ಪ್ರದೇಶದ ಗಂಗಾ ತಟದ ಸ್ವಚ್ಛತೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶುಕ್ರವಾರ ನೋಯ್ಡಾ ಪ್ರವೇಶ ಮಾಡಿದ್ದ ರೈತರು ಇದೀಗ ದೆಹಲಿಗೆ ಪ್ರವೇಶಿಸಿ ಪ್ರತಿಭಟನೆ ಕೈಗೊಳ್ಳಲಿದ್ದಾರೆ. ದೆಹಲಿಯಲ್ಲಿ ಈ ಬೃಹತ್ ರ್ಯಾಲಿಯ ಬಳಿಕ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಸಲ್ಲಿಸಲಿದ್ದಾರೆ.
ರೈತರ ಬೃಹತ್ ಪ್ರತಿಭಟನೆ ಹಿನ್ನಲೆಯಲ್ಲಿ ಈಗಾಗಲೇ ರಾಜಧಾನಿ ದೆಹಲಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದೇ ಸೆಪ್ಟೆಂಬರ್ 17ರಂದು ಉತ್ತರ ಪ್ರದೇಶದ ಸಹರಣ್ ಪುರದಲ್ಲಿ ರೈತರ ಬೃಹತ್ ಪ್ರತಿಭಟನೆ ಆರಂಭವಾಗಿದ್ದು, ಇಂದು ದೆಹಲಿಗೆ ಪ್ರವೇಶಿಸಿ ಪ್ರತಿಭಟನೆ ಕೈಗೊಳ್ಳಲಿದ್ದಾರೆ.
ದೇಶದ ಎಲ್ಲಾ ಕಲುಷಿತ ನದಿಗಳ ಸ್ವಚ್ಛತೆಗೆ ಕ್ರಮಕೈಗೊಳ್ಳಬೇಕು ಮತ್ತು ನದಿಗಳನ್ನು ಮಾಲಿನ್ಯಗೊಳಿಸುವ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ರೈತರ ಎಲ್ಲಾ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, 14 ದಿನಗಳ ನಿಗದಿತ ಸಮಯದಲ್ಲಿ ಕಬ್ಬಿನ ಬಾಕಿ ಪಾವತಿಸಬೇಕು, ಕೊನೆಯ ಬಾಕಿ ಮೊತ್ತವನ್ನು ರೈತರಿಗೆ ಬಡ್ಡಿ ಸಹಿತ ನೀಡಬೇಕು, ಕೃಷಿಗಾಗಿ ಬಳಸುವ ವಿದ್ಯುತ್ ಅನ್ನು ರೈತರಿಗೆ ಉಚಿತವಾಗಿ ನೀಡಬೇಕು, ರೈತ ವಿಮಾ ಯೋಜನೆ ಇಡೀ ಕುಟುಂಬಕ್ಕೆ ವಿಸ್ತಾರವಾಗಬೇಕು, ಸ್ವಾಮಿನಾಥನ್ ವರದಿ ಜಾರಿಗೆ ಬರಬೇಕು, ಉಚಿತ ಶಿಕ್ಷಣ ಮತ್ತು ಉಚಿತ ಔಷಧಿಗಳ ವಿತರಣೆ ದೇಶದಾದ್ಯಂತ ಜಾರಿಗೆ ಬರಬೇಕು, ಭೂಮಿ ಸ್ವಾಧಿನ ಪಡಿಸಿಕೊಳ್ಳುವ ಪ್ರಕ್ರಿಯೇ ಶೀಘ್ರ ಇತ್ಯರ್ಥವಾಗಬೇಕು ಇವು ರೈತರ ಪ್ರಮುಖ ಬೇಡಿಕೆಗಳು.