ಮಂಡ್ಯ, ಸೆ 21 (Daijiworld News/RD): ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ದೇಹ ಬಂಗಾರ. ಆದರೆ ಕಿವಿ ಮಾತ್ರ ಹಿತ್ತಾಳೆ ಎಂದು ಹೇಳುವ ಮೂಲಕ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಜೆಡಿಎಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಜಿಲ್ಲೆಯ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಚಾಡಿಕೋರರ ಮಾತುಗಳನ್ನು ನಂಬುತ್ತಾರೆ. ಚಾಡಿಕೋರರ ಮಾತುಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸುವುದಿಲ್ಲ. ಇದು ಪಕ್ಷದ ಮೇಲೆ ಪರಿಣಾಮ ಬೀರುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಡೀ ಒಕ್ಕಲಿಗೆರ ನಾಯಕರನ್ನು ತಯಾರು ಮಾಡಿರುವವರೇ ದೇವೇಗೌಡರು ಎಂದರು.
ಈ ವೇಳೆ ಜೆಡಿಎಸ್ ಸೋಲಿನ ಬಗ್ಗೆ ಮಾತನಾಡಿದ ಅವರು, ಕಳೆದ ಸಂಸತ್ ಚುನಾವಣೆಯಲ್ಲಿ ನಿಖಿಲ್ ಸೋಲಿಗೆ ಜೆಡಿಎಸ್ನ ಯಾವುದೇ ಮುಖಂಡರು ಕಾರಣರಲ್ಲ. ಸುಮಲತಾ ಅವರ ಗೆಲುವಿನ ಹಿಂದೆ ಮತದಾರರ ತೀರ್ಮಾನವಿತ್ತು ಎಂದರು. ಶಾಸಕರು ತಮ್ಮ ಕ್ಷೇತ್ರದ ಕೆಲಸದ ಕಡೆ ಗಮನ ಹರಿಸುವುದು ಮುಖ್ಯ, ಜನಸಾಮಾನ್ಯರ ಕೆಲಸ ಮಾಡಿಕೊಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ರಾಮೇಗೌಡ, ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಇದ್ದರು.