ಬೆಂಗಳೂರು, ಸೆ 21 (Daijiworld News/RD): ಟ್ರಾಫಿಕ್ ಪೊಲೀಸ್ ಒಬ್ಬರು ಟೆಂಪೋ ಚಾಲಕನ ಮೇಲೆ ಹಲ್ಲೆ ನಡೆಸಿ, ಅವ್ಯಾಚ ಶಬ್ಧಗಳಿಂದ ನಿಂದಿಸಿದ ಘಟನೆ ಬೆಂಗಳೂರು ನಗರದ ಟೌನ್ ಹಾಲ್ ಬಳಿ ಇಂದು ಮುಂಜಾನೆ ನಡೆದಿದೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಟ್ರಾಫಿಕ್ ಪೊಲೀಸ್ ತೋರಿದ ದೌರ್ಜನ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಬಿಬಿಎಂಪಿ ಕಡೆಯಿಂದ ಟೌನ್ ಹಾಲ್ ಬಳಿ ಯೂ ಟರ್ನ್ ತೆಗೆದುಕೊಂಡ ಎಂಬ ಕಾರಣಕ್ಕೆ ಟೆಂಪೊ ಟ್ರಾವೆಲರ್ ಚಾಲಕ ಸುನಿಲ್ ಎಂಬ ಯುವಕನಿಗೆ ಟ್ರಾಫಿಕ್ ಪೊಲೀಸ್ ಒಬ್ಬರೂ ಥಳಿಸಿದ್ದಾರೆ. ಅಷ್ಟೆ ಅಲ್ಲದೆ ಅತ್ಯಂತ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ. ಈ ಘಟನೆಯ ಪೂರ್ಣ ದೃಶ್ಯಗಳನ್ನು ಚಾಲಕ ಸುನಿಲ್ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಇದೀಗ ವಿಡಿಯೋ ಭಾರಿ ವೈರಲ್ ಆಗಿದೆ. ಟ್ರಾಫಿಕ್ ಪೊಲೀಸ್ ನ ಈ ವರ್ತನೆಗೆ ಸಾರ್ವಜನಿಕರು ಗರಂ ಆಗಿದ್ದಾರೆ.
ಯೂ ಟರ್ನ್ ತೆಗೆದುಕೊಂಡನೆಂಬ ಕಾರಣಕ್ಕೆ ಟೆಂಪೋ ಏರಿ ಚಾಲಕನ ಪಕ್ಕ ಕೂತ ಪೊಲೀಸ್ ಪೇದೆ, ಮೊದಲಿಗೆ ಗಾಡಿಯನ್ನು ರಸ್ತೆಯ ಬದಿಗೆ ನಿಲ್ಲಿಸುವಂತೆ ಗದರಿಸಿ ಹೇಳಿದ್ದಾರೆ. ಚಾಲಕ ಸುನಿಲ್, 'ಇಲ್ಲಿ ವಾಹನಗಳಿವೆ ಮುಂದೆ ನಿಲ್ಲಿಸುತ್ತೇನೆ' ಎಂದಿದ್ದಾರೆ. ಆಗ ತಾನೇ ವಾಹನದ ಸ್ಟೀರಿಂಗ್ ವ್ಹೀಲ್ ಹಿಡಿದು ಪಕ್ಕಕ್ಕೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಪೊಲೀಸ್ ಪೇದೆ.
ನೂತನ ಮೋಟಾರು ವಾಹನ ಕಾಯ್ದೆ ಜಾರಿಗೊಂಡ ಬಳಿಕ, ಪೊಲೀಸರ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಲಿದ್ದು, ಜೊತೆಗೆ ಸಾರ್ವಜನಿಕರು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ.