ನವದೆಹಲಿ, ಸೆ 21 (Daijiworld News/RD): ಭಾರತೀಯ ಚುನಾವಣಾ ಆಯೋಗ ಹರ್ಯಾಣ, ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ 15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಡೇಟ್ ಫಿಕ್ಸ್ ಮಾಡಿದೆ.
ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ 15 ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಅಕ್ಟೋಬರ್ 21 ರಂದು ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಎರಡು ಕ್ಷೇತ್ರಗಳಿಗೆ ಆರ್ ಆರ್ ನಗರ ಮತ್ತು ಮಸ್ಕಿ ಕ್ಷೇತ್ರಗಳಲ್ಲಿ ಉಪಚುನಾವಣೆ ದಿನಾಂಕ ಘೋಷಿಸಿಲ್ಲ. ಇಂದಿನಿಂದಲೇ ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಅಯೋಗ ತಿಳಿಸಿದೆ.
ಸೆಪ್ಟಂಬರ್ 23ಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ. ಅಕ್ಟೋಬರ್ 4ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಇನ್ನೂ ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳಿಗೂ ದಿನಾಂಕ ಘೋಷಣೆ ಮಾಡಲಾಗಿದ್ದು ಅಕ್ಟೋಬರ್ 21 ರಂದು ಮತದಾನ ನಡೆಯಲಿದೆ, ಅಕ್ಟೋಬರ್ 24 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕದ ಗೋಕಾಕ್, ಅಥಣಿ, ಕಾಗವಾಡ, ಹಿರೆಕೆರೂರು, ಯಲ್ಲಾಪುರ, ಯಶವಂತಪುರ್, ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು, ಕೆಆರ್ ಪೇಟೆ, ಮಹಾಲಕ್ಷ್ಮಿ ಲೇಔಟ್, ಕೆಆರ್ ಪುರ, ರಾಣೇಬೆನ್ನೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಲಿದೆ.