ಮೈಸೂರು, ಸೆ 21 (Daijiworld News/RD): ಉಪ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸುವ ಮೂಲಕ ಚುನಾವಣಾ ಫಲಿತಾಂಶದಂದು ಬಿಜೆಪಿ ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 15 ಉಪ ಚುನಾವಣೆಯಲ್ಲಿ ನಡೆಯಲಿದ್ದು, ಅದರಲ್ಲಿ ಕನಿಷ್ಠ 8 ಕ್ಷೇತ್ರಗಳಲ್ಲಿಯಾದರೂ ಜೆಡಿಎಸ್ ಗೆಲುವು ಸಾಧಿಸುವ ಮೂಲಕ ಬಿಜೆಪಿ ಸರ್ಕಾರವನ್ನು ಪತನಗೊಳಿಸುತ್ತೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದರೆ ರಾಜ್ಯ ಬಿಜೆಪಿ ಸರಕಾರ ಮುಂದುವರೆಯಲು ಸಾಧ್ಯವಿಲ್ಲ. ಹಾಗಾಗಿ ಶಾಸಕರನ್ನು ನಾವು ಖರೀದಿಸದೆ, ಶಾಸಕರನ್ನು ಕೂಡಿಹಾಕದೆ ಈ ಚುನಾವಣೆಯನ್ನು ಗೆಲ್ಲುತ್ತೇವೆ ಎಂದು ವ್ಯಂಗ್ಯವಾಡಿದರು. ಉಪ ಚುನಾವಣೆಯ ಫಲಿತಾಂಶದ ದಿನವೇ ಈ ಸರ್ಕಾರ ಬೀಳುವ ಕೊನೆಯ ಗಡುವು ಎಂದು ಹೇಳಿದರು.
ಈ ಉಪ ಚುನಾವಣೆ ರಾಜ್ಯ ರಾಜಕೀಯದ ಮುಂದಿನ ಬೆಳವಣಿಗೆ ನಿರ್ಧರಿಸುತ್ತದೆ. ರಾಜ್ಯದ 15 ಕ್ಷೇತ್ರದ ಚುನಾವಣಾ ಫಲಿತಾಂಶ ರಾಜ್ಯ ರಾಜಕೀಯದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದರು.