ಭುವನೇಶ್ವರ, ಸೆ.21(Daijiworld News/SS): ತಂತ್ರಜ್ಞಾನದ ದೃಷ್ಟಿಯಲ್ಲಿ ಹೇಳುವುದಾದರೆ, ಚಂದ್ರಯಾನ 2 ಶೇ.98ರಷ್ಟು ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.
ಚಂದ್ರಯಾನ-2ಯೋಜನೆಯ ಉದ್ದೇಶಗಳು ಶೇ.98ರಷ್ಟು ಈಡೇರಿವೆ. ಆದರೂ ವಿಜ್ಞಾನಿಗಳು ಲ್ಯಾಂಡರ್ ವಿಕ್ರಂ ಜತೆಗೆ ಸಂಪರ್ಕ ಸಾಧಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಚಂದ್ರಯಾನ 2ರ ಕಕ್ಷಾಗಾಮಿ ಉತ್ತಮವಾಗಿದ್ದು, ಅದಕ್ಕೆ ನಿಯೋಜಿಸಿದ್ದ ಪ್ರಯೋಗಗಳಲ್ಲಿ ನಿರತವಾಗಿದೆ. ಚಂದ್ರಯಾನ-2 ಎರಡು ರೀತಿಯಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು. ಒಂದು ವಿಜ್ಞಾನದಲ್ಲಿ ಮತ್ತೊಂದು ತಂತ್ರಜ್ಞಾನ. ತಂತ್ರಜ್ಞಾನದ ದೃಷ್ಟಿಯಲ್ಲಿ ಹೇಳುವುದಾದರೆ, ಚಂದ್ರಯಾನ 2 ಶೇ.98ರಷ್ಟು ಯಶಸ್ವಿಯಾಗಿದೆ ಎಂದು ಹೇಳಿದರು.
ಮುಂದಿನ ವರ್ಷ ಮಾನವರಹಿತ ಚಂದ್ರಯಾನ ನಮ್ಮ ಮೊದಲ ಆಧ್ಯತೆಯಾಗಿದೆ. ಇಸ್ರೋ 2020ರಲ್ಲಿ ಮತ್ತೊಂದು ಚಂದ್ರಯಾನ ಕೈಗೊಳ್ಳಲಿದೆ. ಈ ಕುರಿತು ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ. ಅದಕ್ಕೂ ಮೊದಲು ನಾವು ಚಂದ್ರ ಯಾನ 2ರ ಲ್ಯಾಂಡರ್ ವಿಕ್ರಂಗೆ ಏನಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.