ಬೆಂಗಳೂರು, ಸೆ 22 (Daijiworld News/RD): ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಅನರ್ಹ ಶಾಸಕರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಈ ವೇಳೆ ಅನರ್ಹ ಶಾಸಕರು ತಮ್ಮ ಭವಿಷ್ಯದ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಭೆಯು ನಗರದ ಅರಣ್ಯ ಇಲಾಖೆ ಅತಿಥಿ ಗೃಹದಲ್ಲಿ ನಡೆಯಿತು. ಈ ವೇಳೆ ಅನರ್ಹ ಶಾಸಕರು ತಮ್ಮ ಭವಿಷ್ಯದ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ನಾವು ಉಪಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.ಇದರಿಂದಾಗಿ ನಮ್ಮ ರಾಜಕೀಯ ಭವಿಷ್ಯವೇ ಹಾಳಾಗಿ ಹೋಗಿದೆ. ನಿಮ್ಮನ್ನು ನಂಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಆದರೆ ತಮ್ಮ ಕಾನೂನು ಹೋರಾಟ ಸೇರಿದಂತೆ ಯಾವುದೇ ವಿಚಾರಗಳಲ್ಲಿ ಸರ್ಕಾರ ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಅವರನ್ನು ಅನರ್ಹರು ತರಾಟೆಗೆ ತೆಗೆದುಕೊಂಡಿದ್ದಾರೆ.
ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಹಾಗೂ ಅನರ್ಹರು ದೆಹಲಿಗೆ ತೆರಲಿದ್ದು, ಅನರ್ಹ ಶಾಸಕರು ಮತ್ತು ಉಪಚುನಾವಣೆ ತಂತ್ರದ ಕುರಿತು ಹೈಕಮಾಂಡ್ ಜತೆ ಚರ್ಚಿಸಲಿದ್ದಾರೆ. ಇದರೊಡನೆ ಸೋಮವಾರ ಅನರ್ಹ ಶಾಸಕರ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಅವರೊಡನೆ ಅನರ್ಹರು ಚರ್ಚಿಸಲಿದ್ದಾರೆ ಎನ್ನಲಾಗಿದೆ.