ಬೆಂಗಳೂರು, ಸೆ 22 (Daijiworld News/RD): ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್ ಅಮಿತ್ ಶಾರನ್ನ ಭೇಟಿಯಾಗಲು ದೆಹಲಿಗೆ ಹೋಗಿರೋದು ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಅಲ್ಲ, ಬದಲಾಗಿ ಅನರ್ಹರ ಶಾಸಕರನ್ನು ಬಚಾವ್ ಮಾಡಲು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, "ಆಪರೇಷನ್ ಕಮಲದ ಸಂತ್ರಸ್ತರ ರಕ್ಷಣೆಗಾಗಿ ದೆಹಲಿಗೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಸಂತ್ರಸ್ತರ ಪರಿಹಾರ ಧನ ಸಹಾಯ ಕೋರಲು ದೆಹಲಿಗೆ ತರಳಿದ್ದೇನೆ ಎಂದಿರುವುದು ಒಂದು 'ರಾಜಕೀಯ ನಾಟಕ'. ಅಮಿತ್ ಶಾ ರ ಪ್ರಭಾವ ಬಳಸಿ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲದ ಸಂತ್ರಸ್ತ ಅನರ್ಹರನ್ನು ಬಚಾವ್ ಮಾಡಿಸಲಷ್ಟೇ ಬಿಎಸ್ ವೈ ದೆಹಲಿಗೆ ಹೋಗಿದ್ದಾರೆ.’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ಯಡಿಯೂರಪ್ಪ ದೆಹಲಿಗೆ ದೌಡಾಯಿಸಿದ್ದು, ಕೂತೂಹಲಕರವಾದ ಬೆಳವಣಿಗೆ ಮೂಡಿಸಿದೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಅತೃಪ್ತ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲೇ ಇರುವುದರಿಂದ, ಒಂದು ವೇಳೆ ಅನರ್ಹ ಶಾಸಕರು ಮುಂಬರುವ ಉಪಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದೇ ಹೋದರೆ, ಆ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್-ಜೆಡಿಎಸ್ ಮೇಲುಗೈ ಸಾಧಿಸುವ ಭೀತಿ ಬಿಜೆಪಿಗೆ ಎದುರಾಗಲಿದೆ.