ಬೆಂಗಳೂರು, ಸೆ 22 (Daijiworld News/RD): ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಈಗ ರಾಜ್ಯದ ಜನತೆ ಮುಖ್ಯ ಆಗುವುದಿಲ್ಲ, ಅವರ ಕಷ್ಟವೂ ಅರ್ಥವಾಗುವುದಿಲ್ಲ, ಅವರಿಗೆ ಸಿಎಂ ಕುರ್ಚಿಯ ಬಗ್ಗೆ ಚಿಂತೆಯಾಗಿದೆ ಹಾಗಾಗಿ ಅವರು ದೆಹಲಿಗೆ ಹೋಗಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹದಿಂದ ಕಂಗೆಟ್ಟು ಹೋಗಿದ್ದು, ರಾಜ್ಯದ ಜನರು ತೀರಾ ಸಂಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಹೇಗೆ ತನ್ನ ಆಸ್ಥಾನವನ್ನು ಭದ್ರವಾಗಿ ಉಳಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ದೆಹಲಿಗೆ ತೆರಳಿದ್ದಾರೆ ಎಂದು ಸಿಎಂ ವಿರುದ್ಧ ಗುಡುಗಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯರನ್ನು ಹೊಗಳಿ, ಯಡಿಯೂರಪ್ಪರನ್ನು ತೆಗಳಿದ ಅವರು, ರಾಜ್ಯದ ಜನತೆಯ ಬಗ್ಗೆ ತೇಜಸ್ವಿ ಸೂರ್ಯ ಅವರಿಗೆ ಇರುವ ಅವರ ಬದ್ಧತೆ ನನಗೆ ಇಷ್ಟ ಆಯ್ತು. ಉದಯೋನ್ಮುಖ ನಾಯಕರಿಗೆ ಇಂತಹ ಭಾವನೆ ಇರಬೇಕಾಗಿರುವುದು ಅಗತ್ಯ. ಪಕ್ಷ ಯಾವುದಾದರೂ ಇರಲಿ ಅವರ ಕಾರ್ಯಕ್ಕೆ ನಾನು ಮುಖ್ಯ ಶ್ಲಾಘಿಸುತ್ತೇನೆ ಹೊರತು ಪ್ರಮಾಣ ಪತ್ರ ಕೊಡುವುದಿಲ್ಲ. ರಾಜ್ಯದ ಜನತೆಯ ಬಗ್ಗೆ ಅವರಿಗಿರುವ ಕಾಳಜಿ ಇಷ್ಟ ಆಯಿತು. ಇನ್ನು ಯಡಿಯೂರಪ್ಪನವರಿಗೆ ರಾಜ್ಯದ ಜನರ ಪರವಾಗಿ ಬದ್ಧತೆ ಇಲ್ಲ. ಅವರಿಗೆ ಕುರ್ಚಿ ಮೇಲೆ ಚಿಂತೆ ಎಂದು ವಾಗ್ದಾಳಿ ನಡೆಸಿದ್ದಾರೆ.