ನವದೆಹಲಿ, ಸೆ.23(Daijiworld News/SS): ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿಯಲ್ಲಿ ಅನರ್ಹಗೊಂಡ 17 ಶಾಸಕರ ಭವಿಷ್ಯ ಸೆ. 23, ಸೋಮವಾರ ನಿರ್ಧಾರವಾಗಲಿದೆ.
ರಾಜ್ಯದಲ್ಲಿ ಉಪ ಚುನಾವಣೆ ಘೊಷಣೆಯ ಅನಿರೀಕ್ಷಿತ ಬೆಳವಣಿಗೆಯಿಂದ ಕಂಗೆಟ್ಟಿರುವ ಅನರ್ಹ ಶಾಸಕರ ಪಾಲಿಗೆ ಇಂದು ನಿರ್ಣಾಯಕ ದಿನ. ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿರುವ ಅನರ್ಹರು ಸೋಮವಾರದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ನಿಂದ ಶುಭ ಸುದ್ದಿ ಹೊರಬೀಳುವ ನಿರೀಕ್ಷೆಯಲ್ಲಿದ್ದಾರೆ.
ಒಟ್ಟಾರೆ, ಅನರ್ಹರ ಪಾಲಿಗೆ ಸೋಮವಾರ ಅತ್ಯಂತ ನಿರ್ಣಾಯಕ ದಿನ. ಸ್ಪೀಕರ್ ಆದೇಶಕ್ಕೆ ತಡೆ ಪಡೆಯಬೇಕು ಇಲ್ಲವೇ ಪ್ರಕರಣ ಇತ್ಯರ್ಥವಾಗುವ ತನಕ ಚುನಾವಣೆ ಘೋಷಣೆಗೆ ತಡೆ ಹಿಡಿಯಬೇಕು. ಒಂದು ವೇಳೆ ಇವೆರಡಕ್ಕೂ ಕೋರ್ಟ್ನಿಂದ ಪುರಸ್ಕಾರ ಸಿಗದಿದ್ದರೆ ಅನರ್ಹರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ.
ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ್ದರೂ, ನಮ್ಮದು ವಿಭಿನ್ನ ಪ್ರಕರಣ ಮತ್ತು ಮಧ್ಯಂತರ ಪರಿಹಾರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಬೇಕೆಂಬ ಮನವಿಯನ್ನು ನ್ಯಾಯಾಲಯದ ಮುಂದಿಡಲು ಅನರ್ಹರು ತಯಾರಿ ನಡೆಸಿದ್ದಾರೆ. ಪ್ರಸಕ್ತ ವಿಧಾನಸಭೆಯ ಅವಧಿ ಮುಕ್ತಾಯವಾಗುವ ತನಕ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಸ್ಪೀಕರ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದರೆ ಮಾತ್ರ ಅನರ್ಹರ ರಾಜಕೀಯ ಭವಿಷ್ಯಕ್ಕೆ ಗುಟುಕು ಜೀವ ಬಂದಂತೆ ಆಗುತ್ತದೆ. ಇಲ್ಲದಿದ್ದರೆ ಸ್ಪರ್ಧೆಗೆ ಪರ್ಯಾಯ ವ್ಯಕ್ತಿಗಳ ಶೋಧ ಅನಿವಾರ್ಯವಾಗಲಿದೆ.