ಕಾಕಿನಾಡ, ಸೆ 23 (Daijiworld News/RD): ಭಾರತದೊಂದಿಗೆ ಯುದ್ದ ಮಾಡುವ ಹರಸಾಹಸ ತೋರಿಸಿದರೆ ಪಾಕಿಸ್ಥಾನ ವಿಶ್ವ ಭೂಪಟದಿಂದಲೇ ಮಾಯವಾಗಲಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಹೇಳಿದ್ದಾರೆ.
ಆಂಧ್ರಪ್ರದೇಶದ ಕಾಕಿನಾಡದಲ್ಲಿ ‘ಜನ್ ಜಾಗರಣ್’ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಶನ್ ರೆಡ್ಡಿ, ಒಂದು ವೇಳೆ ಯುದ್ದ ನಡೆದರೆ ಪಾಕಿಸ್ಥಾನ ಸರ್ವನಾಶವಾಗಲಿದೆ ಎಂದು ಹೇಳಿದ್ದಾರೆ.
ನಮ್ಮದು ದೇಶ ಪ್ರೇಮದ ಸರ್ಕಾರ, ನರೇಂದ್ರ ಮೋದಿ ನೇತೃತ್ವದ ಸರಕಾರ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಜಗತ್ತಿಗೆ ಸಾರಿದೆ ಎಂದು ಕಿಶನ್ ರೆಡ್ಡಿ ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ವಿಷಯದ ಕುರಿತು ಮಾತನಾಡಿದ ಅವರು, ಸಮಯ ಬಂದಾಗ ಸರಿಯಾದ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು. ಜಮ್ಮು ಮತ್ತು ಕಾಶ್ಮಿರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ಯಾವುದೇ ರೀತಿಯ ಗಲಭೆ ಅಥವಾ ಅಹಿತಕರ ಘಟನೆಗಳು ನಡೆದಿಲ್ಲ ಇದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.