ಪಟನಾ, ಸೆ.23(Daijiworld News/SS): ಮತ್ತೊಂದು ಯುದ್ಧ ನಡೆದದ್ದೇ ಆದಲ್ಲಿ ಪಾಕಿಸ್ತಾನ ಮತ್ತಷ್ಟು ಛಿದ್ರಗೊಳ್ಳಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
370ನೇ ವಿಧಿ ರದ್ದತಿಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಗಾಯಗೊಂಡ ಪರಿಸ್ಥಿತಿಯಲ್ಲಿತ್ತು. ಯಾಕೆಂದರೆ 370ನೇ ವಿಧಿ ಕ್ಯಾನ್ಸರ್ನಂತೆ ಕಣಿವೆ ರಾಜ್ಯವನ್ನು ಕಿತ್ತು ತಿನ್ನುತ್ತಿತ್ತು. ಕಣಿವೆ ರಾಜ್ಯದ ಶೇ.75ರಷ್ಟು ನಿವಾಸಿಗರು 370ನೇ ವಿಧಿ ರದ್ದತಿಗೆ ಆಗ್ರಹಿಸಿದ್ದರು. ಸದ್ಯ ಅವರೆಲ್ಲರೂ ನಿಟ್ಟುಸಿರುಬಿಡುತ್ತಿದ್ದಾರೆ ಎಂದು ಹೇಳಿದ್ದಾರೆ.
1965 ಮತ್ತು 1971ರಲ್ಲಿ ಕಾಲ್ಕೆರೆದುಕೊಂಡು ಯುದ್ಧಕ್ಕೆ ಬಂದ ತಪ್ಪನ್ನು ಪುನಃ ಮಾಡಿದರೆ ಜಗತ್ತಿನ ಯಾವ ಶಕ್ತಿಯೂ ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ. ಮತ್ತೊಂದು ಯುದ್ಧ ನಡೆದದ್ದೇ ಆದಲ್ಲಿ ಪಾಕಿಸ್ತಾನ ಮತ್ತಷ್ಟು ಛಿದ್ರಗೊಳ್ಳಲಿದೆ ಎಂದು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಸುಮ್ಮನೆ ಯುದ್ಧಕ್ಕೆ ಪ್ರಚೋದಿಸುತ್ತಿರುವ ಪಾಕಿಸ್ತಾನ ಪಿಒಕೆ ಬಗ್ಗೆ ಚಿಂತಿಸಬೇಕು. ಬಲೂಚಿಸ್ತಾನದಲ್ಲಿ ಸ್ಥಳೀಯರು ಮತ್ತು ಪಶ್ತೂನ್ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಾನವ ಹಕ್ಕು ಉಲ್ಲಂಘನೆಗಳನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಪಾಕ್ ಹೋಳಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನ ಮಾತ್ರ ಗಡಿಯಾಚೆಗೆ ತನ್ನ ಉಗ್ರರನ್ನು ನುಸುಳಿಸುವುದನ್ನು ಬಿಟ್ಟಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.