ನವದೆಹಲಿ, ಸೆ.23(Daijiworld News/SS): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುವಂತೆ ಮಾಡುವ ಕೆಲಸವನ್ನು ನಾವು ಆರಂಭಿಸಬೇಕಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಸ್ವಾತಂತ್ರ್ಯ ಸಿಕ್ಕಿದ ಸಂದರ್ಭ ಮತ್ತು ನಂತರದಲ್ಲಿ ಕಾಶ್ಮೀರ ವಿಚಾರವನ್ನು ನೆಹರು ಅವರ ಬದಲಾಗಿ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಿರ್ವಹಿಸಿದ್ದರೆ, ಇಂದು ನಮ್ಮೆದುರು ಕಾಶ್ಮೀರ, ಪಿಒಕೆಗಳ ಸಮಸ್ಯೆಯೇ ಇರುತ್ತಿರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಸರಕಾರ 370ನೇ ವಿಧಿ ರದ್ದುಗೊಳಿಸಿದೆ. ಆದರೆ ಬಿಜೆಪಿ ಕಾರ್ಯಕರ್ತರ ಕೆಲಸ ಇಲ್ಲಿಗೆ ಮುಗಿಯುವುದಿಲ್ಲ. ಕಣಿವೆ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುವಂತೆ ಮಾಡುವ ಕೆಲಸವನ್ನು ನಾವು ಆರಂಭಿಸಬೇಕಿದೆ ಎಂದು ಹೇಳಿದರು.
ಪಾಕ್ ಆಕ್ರಮಿತ ಕಾಶ್ಮೀರ ಎಂಬ ಸಮಸ್ಯೆ ಸೃಷ್ಟಿಯಾಗಲು ಅಂದು ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರೇ ನೇರ ಕಾರಣ. ನೆಹರು ಅವರು ಪಾಕಿಸ್ತಾನದ ಜತೆಗೆ ಅಕಾಲಿಕವಾಗಿ ಕದನ ವಿರಾಮ ಘೋಷಿಸಿದ್ದರಿಂದ ಪಾಕ್ ಆಕ್ರಮಿತ ಕಾಶ್ಮೀರ ಎಂಬ ತಲೆನೋವು ನಮ್ಮ ಎದುರಿಗಿದೆ. ಹಾಗೆಯೇ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನ ಮಾಡದೇ ಪ್ರತ್ಯೇಕರಿಸಿದ್ದು ಸಹ ದೇಶ ಎದುರಿಸುತ್ತಿರುವ ಮತ್ತೊಂದು ಸಮಸ್ಯೆಗೆ ಕಾರಣ ಎಂದು ಹೇಳಿದ್ದಾರೆ.
ಬಿಜೆಪಿ ಪಾಲಿಗೆ 370ನೇ ವಿಧಿ ರದ್ದತಿ ಎಂದರೆ ದೇಶದೊಂದಿಗೆ ಕಾಶ್ಮೀರವನ್ನು ಒಂದಾಗಿಸುವ ಏಕತೆಯ ಭರವಸೆಯಾಗಿದೆ. ಆದರೆ ಕಾಂಗ್ರೆಸ್ ಮಾತ್ರ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಕಣಿವೆ ರಾಜ್ಯದಲ್ಲಿ ಹೇರಲಾಗಿದ್ದ ನಿರ್ಬಂಧಗಳು 196 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ತೆರವುಗೊಂಡಿವೆ. ಶೇ. 99ರಷ್ಟು ದೂರವಾಣಿಗಳು ಕಾರ್ಯನಿರ್ವಹಿಸುತ್ತಿವೆ. ಶೇ. 67 ರಷ್ಟು ಮೊಬೈಲ್ ಸಂಪರ್ಕವನ್ನು ಮರುಕಲ್ಪಿಸಲಾಗಿದೆ. ನಿಷೇಧಾಜ್ಞೆ ಹಿಂಪಡೆಯಲಾಗಿದೆ. ಮಾರುಕಟ್ಟೆಯಲ್ಲಿವ್ಯಾಪಾರ ಸರಾಗವಾಗಿ ಸಾಗಿದೆ. ಹಾಗಿದ್ದೂ ಕಣಿವೆಯಲ್ಲಿನ ನಿರ್ಬಂಧಗಳ ಬಗ್ಗೆ ಕಾಂಗ್ರೆಸ್ ವೃಥಾ ಆರೋಪ ಮಾಡುವುದರಲ್ಲಿ ನಿರತವಾಗಿದೆ ಎಂದು ದೂರಿದರು.