ನವದೆಹಲಿ, ಸೆ 23 (Daijiworld News/RD): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿರುವ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ತಿಹಾರ ಜೈಲಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭೇಟಿಯಾಗಿ ಭರವಸೆಯ ಮಾತುಗಳನ್ನಾಡಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ತಿಹಾರ್ ಜೈಲಿಗೆ ಆಗಮಿಸಿದ ಸೋನಿಯಾ ಗಾಂಧಿ ಕೇವಲ ಪಿ. ಚಿದಂಬರಂ ಅವರನ್ನು ಭೇಟಿಯಾಗಲಷ್ಟೇ ಸಾಧ್ಯವಾಯಿತು. ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಅವಕಾಶ ಸಿಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಐಎನ್ಎಕ್ಸ್ ಮೀಡಿಯಾ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಸೆರೆವಾಸದಲ್ಲಿದ್ದರೆ, ಜೊತೆಗೆ ಕರ್ನಾಟಕದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಇಬ್ಬರೂ ಒಂದೇ ಕಾರಾಗೃಹದಲ್ಲಿದ್ದಾರೆ. ಇಬ್ಬರ ವಿರುದ್ಧವೂ ಇಡಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಪಿ.ಚಿದಂಬರಂ ಅವರನ್ನು ಭೇಟಿಯಾಗಿ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರ ಜೊತೆ ಮಾತುಕತೆ ನಡೆಸಿ, ನಿಮ್ಮ ಜತೆ ನಾವಿದ್ದೇವೆ ಎಂದು ಹೇಳುವ ಮೂಲಕ ಆತ್ಮಸ್ಥೈರ್ಯ ತುಂಬಿದ್ದಾರೆ ಎನ್ನಲಾಗಿದೆ.
ಸೋನಿಯಾ ಗಾಂಧಿ ಅವರು ತಿಹಾರ ಜೈಲಿನ ತೆರಳಿ ಪಿ ಚಿದಂಬರಂ ಅವರನ್ನು ಭೇಟಿ ಮಾಡಿದ್ದಕ್ಕೆ ಕಾರ್ತಿ ಚಿದಂಬರಂ ಸಂತಸ ವ್ಯಕ್ತ ಪಡಿಸಿದ್ದಾರೆ, ಸೋನಿಯಾ ಗಾಂಧಿ ಭೇಟಿಯಿಂದಾಗಿ ನಮ್ಮ ರಾಜಕೀಯ ಹೋರಾಟಕ್ಕೆ ಮತ್ತಷ್ಟು ನೈತಿಕ ಬೆಂಬಲ ಸಿಕ್ಕಿದಂತಾಗಿದೆ ಎಂದು ಕಾರ್ತಿ ಚಿದಂಬರಂ ತಿಳಿಸಿದ್ದಾರೆ.