ನವದೆಹಲಿ, ಸೆ.23(Daijiworld News/SS): ಕಥುವಾ ಪ್ರಾಂತ್ಯದ ದೇವಲ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ ಭಾರಿ ಪ್ರಮಾಣದ ಸ್ಪೋಟಕಗಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಪಾಕಿಸ್ಥಾನದ ಬಾಲಾಕೋಟ್ ಉಗ್ರ ಶಿಬಿರ ಮತ್ತೆ ತಲೆ ಎತ್ತಿದ್ದು, 500ಕ್ಕೂ ಹೆಚ್ಚು ಉಗ್ರರು ತರಬೇತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ದೊರೆತ ಬೆನ್ನಲ್ಲೇ ಈ ಸ್ಫೋಟಕಗಳು ಸಿಕ್ಕಿದ್ದು ಆತಂಕಕ್ಕೆ ಕಾರಣವಾಗಿದೆ. ಭಾರತೀಯ ಸೇನೆಯು 40 ಕೆಜಿ ಸ್ಫೋಟಕಗಳನ್ನು ವಶಕ್ಕೆ ಪಡೆಯುದರೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಬಹುದಾಗಿದ್ದ ಬಹು ದೊಡ್ಡ ಭಯೋತ್ಪಾದಕ ದಾಳಿಯನ್ನು ತಪ್ಪಿಸಿದೆ. ಕಥುವಾ ಪ್ರಾಂತ್ಯದಲ್ಲಿ ಈ ಸ್ಪೋಟಕಗಳನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಈ ಕುರಿತ ನಿಖರ ಮಾಹಿತಿ ಪಡೆದ ಸೇನಾ ಗುಪ್ತಚರ ದಳ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದವು. ಸ್ಪೋಟಕಗಳು ಮತ್ತು ಇತರ ಅನಾಹುತಕಾರಿ ವಸ್ತುಗಳೊಂದಿಗೆ ಓರ್ವನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.