ಬೆಂಗಳೂರು, ಸೆ 23(DaijiworldNews/SM): ಕಳೇದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿದ್ದ ದೋಸ್ತಿ ಸರಕಾರಕ್ಕೆ ತೀವ್ರ ಮುಖಭಂಗವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಈ ಸೋಲಿನ ಹೊರೆಯನ್ನು ಮಾಜಿ ಸಿಎಂ ಕುಮಾರಸ್ವಾಮಿಯವರು, ಮಾಜಿ ಸಿಎಂ ಸಿದ್ದರಾಮಯ್ಯ ತಲೆ ಮೇಲೆ ಹೊರಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರೇ ಕಾರಣ. ಎಲ್ಲವೂ ಸಿದ್ದರಾಮಯ್ಯ ಅವರ ಸ್ವಯಂಕೃತ ಅಪರಾಧ ಎಂದು ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಕಾಂಗ್ರೆಸ್ ಸೋಲು ಸಿದ್ದರಾಮಯ್ಯ ಅವರ ಸ್ವಯಂಕೃತ ಅಪರಾಧವಾಗಿದೆ. ಮಂಡ್ಯದಲ್ಲಿ ಬಿಜೆಪಿ ನಾಯಕರ ಜೊತೆ ಸೇರಿ ಸಿದ್ದರಾಮಯ್ಯ ತಂತ್ರಗಾರಿಕೆ ನಡೆಸಿದ್ದಾರೆ. ಸಿದ್ದರಾಮಯ್ಯನವರು ಏನೆಲ್ಲ ಮಾಡುತ್ತಿದ್ದಾರೆ ಎಂಬುದೆಲ್ಲವೂ ತಮಗೆ ಗೊತ್ತಿದೆ. ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಸಾಯುತ್ತಿದ್ದಾರೆ. ರೈತರ ರಕ್ಷಣೆಗೆ ಬಾರದ ಸಿದ್ದರಾಮಯ್ಯ ಅವರ ಸ್ವಾಭಿಮಾನ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಇನ್ನು 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಜೆಡಿಎಸ್ ಪಕ್ಷ ಚುನಾವಣೆ ಎದುರಿಸಲು ಸನ್ನದ್ದವಾಗಿದೆ. ಎಲ್ಲಾ ರೀತಿಯಲ್ಲೂ ಜೆಡಿಎಸ್ ಪಕ್ಷ ಮತದಾನಕ್ಕೆ ಸಿದ್ದವಾಗಿದೆ ಎಂದಿರುವ ಅವರು, ದೇವೇಗೌಡರ ಕುಟುಂಬ ಈತನಕ ಸಾಕಷ್ಟು ನೋವು ಅನುಭವಿಸಿದೆ. ಉಪ ಚುನಾವಣೆಯಲ್ಲಿ ಕುಟುಂಬದಿಂದ ಇನ್ಯಾರು ಸ್ಪರ್ಧಿಸುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಪಕ್ಷ ಚುನಾವಣೆ ಎದುರಿಸಲು ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ. ಎಲ್ಲಾ ಜಿಲ್ಲೆಗಳ ಮುಖಂಡರ ಸಭೆಯನ್ನು ಈಗಾಗಲೇ ಜೆಡಿಎಸ್ ವರಿಷ್ಠರು ನಡೆಸಿದ್ದಾರೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸಿ ಇನ್ನು ಎರಡು ದಿನಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.