ಬೆಂಗಳೂರು, ಸೆ.24(Daijiworld News/SS): ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಅಧಿವೇಶನವನ್ನು ಅಕ್ಟೋಬರ್ 10ರಿಂದ 12ರ ವೆರೆಗೆ ನಡೆಸಲು ತೀರ್ಮಾನಿಸಲಾಗಿದೆ.
ಉಪಚುನಾವಣೆ ಹಿನ್ನೆಲೆಯಲ್ಲಿ ಚಳಿಗಾಲದ ಅಧಿವೇಶನವನ್ನು ಅಕ್ಟೋಬರ್ 10-12ರ ವರೆಗೆ ಮೂರು ದಿನಗಳಿಗೆ ಮೊಟಕುಗೊಳಿಸಲು ಸಂಪುಟ ಸಭೆ ತೀರ್ಮಾನಿಸಿದೆ.
ಈ ಕುರಿತು ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಈ ಕಳೆದ ಸಚಿವ ಸಂಪುಟ ಸಭೆಯಲ್ಲಿ ವಿಧಾನ ಮಂಡಲಗಳ ಅಧಿವೇಶನವನ್ನು ಅಕ್ಟೋಬರ್ 14 ರಿಂದ 26 ವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಅಧಿವೇಶನವನ್ನು ಅಕ್ಟೋಬರ್ 10ರಿಂದ 12ರ ವೆರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 10-12ರವರೆಗೆ ನಡೆಯುವ ಅಧಿವೇಶನದಲ್ಲಿ ಹಣಕಾಸು ಮಸೂದೆ ಬಿಟ್ಟು ಬೇರೆ ಯಾವುದೇ ವಿಷಯಗಳ ಬಗ್ಗೆ ಚರ್ಚೆ ನಡೆಸುವುದಿಲ್ಲ. ಜತೆಗೆ ಪೂರಕ ಅಂದಾಜಿಗೂ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
15 ಕ್ಷೇತ್ರಗಳಲ್ಲಿ ಉಪಚುನಾವಣೆ ಇರುವ ಕಾರಣ ನೀತಿ ಸಂಹಿತೆ ಜಾರಿಯಲ್ಲಿದೆ. 15 ತಾಲ್ಲೂಕುಗಳಲ್ಲಿ ಅಭಿವೃದ್ಧಿ ಕಾರ್ಯ, ಹೊಸ ಯೋಜನೆ ಘೋಷಿಸುವಂತೆ ಇಲ್ಲ. ನೆರೆ, ಬರ ಸಂಬಂಧಿ ಕಾರ್ಯಕ್ರಮಗಳಿಗೆ ನೀತಿ ಸಂಹಿತೆ ಅಡ್ಡಿ ಬರಲ್ಲ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹತ್ತು ದಿನಗಳ ಬದಲಿಗೆ ಮೂರು ದಿನ ಅಧಿವೇಶನ ನಡೆಸಲಾಗುತ್ತಿದೆ. ಅಧಿವೇಶನದಲ್ಲಿ ಪೂರಕ ಬಜೆಟ್ಗೆ ಮಾತ್ರ ಅನುಮೋದನೆ ನೀಡಲಾಗುವುದು. ಉಳಿದಂತೆ ಯಾವುದೇ ಘೋಷಣೆ ಇಲ್ಲ ಎಂದು ತಿಳಿಸಿದರು.
ಬಜೆಟ್ ಅನುಮೋದನೆಗೆ ಸೀಮಿತವಾಗಿ ಅಧಿವೇಶನ ನಡೆಯಲಿದೆ. ಪೂರಕ ಬಜೆಟ್ ಮಂಡಿಸಲಾಗುವುದು. ಪೂರ್ಣ ಪ್ರಮಾಣದ ಬಜೆಟ್ಗೆ ಅನುಮೋದನೆ ಸಿಗದಿದ್ದರೆ ಲೇಖಾನುದಾನ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.