ಬೆಂಗಳೂರು, ಸೆ.24(Daijiworld News/SS): ಬಂಗಾಳ ಕೊಲ್ಲಿಯಲ್ಲಾಗಿರುವ ವಾಯುಭಾರ ಕುಸಿತದಿಂದಾಗಿ ಸೆ.24ರಿಂದ ಸೆ.27ರವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಮೂರು, ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು "ಯೆಲ್ಲೋ ಅಲರ್ಟ್" ಘೋಷಣೆ ಮಾಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ ಎಪ್ಪತ್ತೆರಡು ಗಂಟೆಗಳ ಕಾಲ ಬೆಂಗಳೂರಿನಾದ್ಯಂತ ಭಾರೀ ಮಳೆಯಾಗಲಿದೆ ಎಂದಿದ್ದು ದಿನನಿತ್ಯ 7 ರಿಂದ 11 ಸೆಂಟಿಮೀಟರ್ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹೇಳಿದೆ.
ದಕ್ಷಿಣ ಒಳನಾಡಿನ ತುಮಕೂರು, ರಾಮನಗರ, ಕೋಲಾರ ಹಾಗೂ ಉತ್ತರ ಒಳನಾಡಿನ ಕಲಬುರಗಿಯಲ್ಲಿ ಸೆ.24ರಂದು ಭಾರಿ ಮಳೆಯಾಗಲಿದೆ. ಕರಾವಳಿಯಲ್ಲಿ ಸೆ.26 ಮತ್ತು ಸೆ.27ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಹಾಸನ, ದಾವಣಗೆರೆ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆ ಇರಲಿದೆ. ಬೀದರ್, ಧಾರವಾಡ, ಗದಗ, ಕಲಬುರಗಿ, ರಾಯಚೂರಿನಲ್ಲಿ ಇನ್ನೂ 4 ದಿನ ಮಳೆಯಾಗುವುದಾಗಿ ಎಚ್ಚರಿಸಲಾಗಿದೆ.