ಬೆಂಗಳೂರು, ಸೆ 24 (Daijiworld News/RD): ಮೈಸೂರು ದಸರಾ ಹಬ್ಬದ ಸಂಭ್ರಮಧಾಚರಣೆ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 8ರ ನಡೆಯಲಿದ್ದು, ಈ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಲು ಸಲುವಾಗಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿಹಿ ಸುದ್ದಿ ನೀಡಿದ್ದು, ಮೈಸೂರು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಪ್ರವಾಸಿ ಪ್ಯಾಕೇಜ್ ಅನ್ನು ಘೋಷಣೆ ಮಾಡಲಾಗಿದೆ.
ಪ್ರತಿ ವರ್ಷವೂ ದಸರಾ ಸಂದರ್ಭದಲ್ಲಿ ಪ್ರವಾಸಿಗರನ್ನು ಸೆಳೆಯಲು ವಿಶೇಷ ಟೂರ್ ಪ್ಯಾಕೇಜ್ ಅನ್ನು ಕೆಎಸ್ಆರ್ಟಿಸಿ ಘೋಷಣೆ ಮಾಡುತ್ತಿದ್ದು, ಈ ಬಾರಿ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 13ರ ತನಕ ಈ ವಿಶೇಷ ಪ್ಯಾಕೇಜ್ನಲ್ಲಿ ಜನರು ಪ್ರವಾಸವನ್ನು ಕೈಗೊಳ್ಳಬಹುದಾಗಿದೆ. ಕೆಎಸ್ಆರ್ಟಿಸಿಯ ವೇಗದೂತ, ರಾಜಹಂಸ, ಐರಾವತ, ಐರಾವತ ಕ್ಲಬ್ ಕ್ಲಾಸ್ ಬಸ್ಗಳ ಮೂಲಕ ಈ ಪ್ರವಾಸವನ್ನು ಕೈಗೊಳ್ಳಬಹುದು ಎಂದು ತಿಳಿಸಿದೆ. ಒಂದು ದಿನದ ವಿಶೇಷ ಪ್ರವಾಸಿ ಪ್ಯಾಕೇಜ್ ಇದಾಗಿದ್ದು, ವಿವಿಧ ದರಗಳನ್ನು ನಿಗದಿ ಮಾಡಲಾಗಿದೆ.
'ಗಿರಿ ದರ್ಶಿನಿ' ಪ್ಯಾಕೇಜ್ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಬಹುದು. ವಯಸ್ಕರಿಗೆ 350 ರೂ. ಮತ್ತು ಮಕ್ಕಳಿಗೆ 175 ರೂ. ದರವನ್ನು ನಿಗದಿ ಮಾಡಲಾಗಿದೆ. 'ಜಲ ದರ್ಶಿನಿ' ಪ್ಯಾಕೇಜ್ನಲ್ಲಿ ಬೈಲುಕುಪ್ಪೆ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆ. ಆರ್. ಎಸ್ ಗೆ ಭೇಟಿ ನೀಡಬಹುದಾಗಿದ್ದು, ವಯಸ್ಕರಿಗೆ 375, ಮಕ್ಕಳಿಗೆ 190 ರೂ. ದರವನ್ನು ನಿಗದಿಪಡಿಸಲಾಗಿದೆ. 'ದೇವ ದರ್ಶಿನಿ' ಪ್ಯಾಕೇಜ್ ಅಡಿ ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ ಹಾಗೂ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಬಹುದಾಗಿದ್ದು, ವಯಸ್ಕರಿಗೆ 275 ರೂ. ಮತ್ತು ಮಕ್ಕಳಿಗೆ 140 ರೂ. ದರವನ್ನು ನಿಗದಿ ಮಾಡಲಾಗಿದೆ.